ಚೀನಾ ನಮ್ಮ ದೇಶದೊಳಗೆ ನುಸುಳಿದಂತೆ ನಾವೂ ಕರ್ನಾಟಕ ಪ್ರವೇಶಿಸುತ್ತೇವೆ: ಸಂಜಯ್ ರಾವುತ್

Update: 2022-12-21 07:44 GMT

ಮುಂಬೈ: ಗಡಿ ವಿಚಾರವಾಗಿ ಕರ್ನಾಟಕ ಹಾಗೂ  ಮಹಾರಾಷ್ಟ್ರದ ನಡುವೆ ಹಗ್ಗಜಗ್ಗಾಟ ನಡೆಯುತ್ತಿರುವ ನಡುವೆಯೇ, ‘ಚೀನಾವು ನಮ್ಮ ದೇಶದೊಳಕ್ಕೆ ನುಗ್ಗಿದಂತೆ ನಾವೂ ಕರ್ನಾಟಕವನ್ನೂ ಪ್ರವೇಶಿಸುತ್ತೇವೆ’ ಎಂದು  ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ ಬಣ) ನಾಯಕ ಸಂಜಯ್ ರಾವುತ್ Sanjay Raut ಅವರು ಬುಧವಾರ ಹೇಳಿಕೆ ನೀಡುವ ಮೂಲಕ ಹೊಸ ವಿವಾದವನ್ನು ಹುಟ್ಟು ಹಾಕಿದ್ದಾರೆ.

ಈ ವಿಚಾರದಲ್ಲಿ ನಮಗೆ ಯಾರ ‘ಅನುಮತಿ’ಯೂ ಬೇಕಾಗಿಲ್ಲ ಎಂದು ಪಕ್ಷದ ಹಿರಿಯ ಮುಖಂಡ ಹೇಳಿದ್ದಾರೆ.

“ಚೀನಾ ಪ್ರವೇಶಿಸಿದಂತೆ ನಾವೂ ಕರ್ನಾಟಕವನ್ನು ಪ್ರವೇಶಿಸುತ್ತೇವೆ. ನಮಗೆ ಯಾರ ಅನುಮತಿಯೂ ಬೇಕಾಗಿಲ್ಲ, ಗಡಿ ವಿವಾದವನ್ನು ಚರ್ಚೆಯ ಮೂಲಕ ಬಗೆಹರಿಸಲು ಬಯಸುತ್ತೇವೆ.  ಆದರೆ ಕರ್ನಾಟಕದ ಸಿಎಂ ಬೆಂಕಿ ಹಚ್ಚುತ್ತಿದ್ದಾರೆ.ಮಹಾರಾಷ್ಟ್ರದಲ್ಲಿ ದುರ್ಬಲ ಸರಕಾರವಿದೆ. ಗಡಿ ವಿಚಾರದಲ್ಲಿ ಅದು ಯಾವುದೇ ನಿಲುವು ತೆಗೆದುಕೊಳ್ಳುತ್ತಿಲ್ಲ" ಎಂದು  ಸಂಜಯ್ ರಾವುತ್ ಹೇಳಿದರು.

ದಶಕಗಳಷ್ಟು ಹಳೆಯದಾದ ಗಡಿ ಸಂಘರ್ಷದ ಕುರಿತು ಮಹಾರಾಷ್ಟ್ರ ಹಾಗೂ  ಕರ್ನಾಟಕದ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವ ಸಮಯದಲ್ಲಿ ರಾವುತ್ ಈ  ಹೇಳಿಕೆ ನೀಡಿದ್ದಾರೆ. ಈ ವಿಚಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.

ಏಕನಾಥ್ ಶಿಂಧೆ ಅವರ ಸರಕಾರ ಈ ವಿಚಾರದಲ್ಲಿ ಟೀಕೆಗಳನ್ನು ಎದುರಿಸುತ್ತಿದೆ. ಮಹಾರಾಷ್ಟ್ರ ವಿಧಾನಸಭೆಯ ಚಳಿಗಾಲದ ಅಧಿವೇಶನದಲ್ಲಿ ಪ್ರತಿಪಕ್ಷವೂ ಈ ವಿಷಯವನ್ನು ಪ್ರಸ್ತಾಪಿಸಿದೆ.

Similar News