ಜೈನಧರ್ಮದ ಪವಿತ್ರ ಕ್ಷೇತ್ರ ‘ಸಮ್ಮೇದ’ ಶಿಖರ ಉಳಿಸಿ ಆಂದೋಲನ

‘ಪ್ರವಾಸಿ ತಾಣ’ ಘೋಷಣೆ ವಿರುದ್ಧ ಜೈನ ಸಂಘಟನೆಗಳ ಪ್ರತಿಭಟನೆ

Update: 2022-12-21 12:54 GMT

ಉಡುಪಿ: ಜಾರ್ಖಂಡ್ ರಾಜ್ಯದ ಗಿರಡಿ ಜಿಲ್ಲೆಯಲ್ಲಿರುವ ಜೈನ ಧರ್ಮೀಯರ ಪವಿತ್ರ ಕ್ಷೇತ್ರ ‘ಸಮ್ಮೇದ ಶಿಖರ’ವನ್ನು ಪ್ರವಾಸಿ ಸ್ಥಳವೆಂದು ಘೋಷಿಸಿ ಅದನ್ನೊಂದು ಪ್ರವಾಸಿ ವ್ಯಾಪಾರ ಕೇಂದ್ರವಾಗಿಸಲು ಹೊರಟ ಜಾರ್ಖಂಡ್ ಸರಕಾರ ಹಾಗೂ ಕೇಂದ್ರ ಸರಕಾರದ ಆದೇಶವನ್ನು ರದ್ದುಪಡಿಸು ವಂತೆ ಆಗ್ರಹಿಸಿ ಉಡುಪಿ ಜಿಲ್ಲೆಯ ಜೈನ ಸಮುದಾಯದ ವಿವಿಧ ಸಂಘಟನೆಗಳು ಇಂದು ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದವು.

ಜಾರ್ಖಂಡ್ ರಾಜ್ಯ ಸರಕಾರದ ಪ್ರವಾಸೋದ್ಯಮ ಇಲಾಖೆ ಈಗಾಗಲೇ ಸಮ್ಮೇದವನ್ನು ಪ್ರವಾಸಿ ತಾಣವೆಂದು ಘೋಷಿಸಿ ಆದೇಶ ಹೊರಡಿಸಿದೆ. ಜೈನರ ಪವಿತ್ರ ತೀರ್ಥಕ್ಷೇತ್ರವನ್ನು ಪ್ರವಾಸಿ ವ್ಯಾಪಾರ ಕೇಂದ್ರವಾಗಿ ಮಾಡಲು ಹೊರಟ ಸರಕಾರಗಳ ನಡೆ ವಿರುದ್ಧ ಜೈನ ಧರ್ಮೀಯರು ಬುಧವಾರ ಬೆಳಿಗ್ಗೆ ರಜತಾದ್ರಿಯಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಎದುರು ’ಸಮ್ಮೇದ ಶಿಖರ ಉಳಿಸಿ ಆಂದೋಲನ’ದ ಮೂಲಕ ಪ್ರತಿಭಟನೆ ನಡೆಸಿದರು.

ಜಿಲ್ಲೆಯ ವಿವಿಧ ಜೈನ ಬಸದಿಗಳ ಪ್ರಮುಖರು ಮಾತನಾಡಿ, ವಿಶ್ವದಾದ್ಯಂತ ಇರುವ ಜೈನ ಧರ್ಮೀಯರ ಪವಿತ್ರ ಕ್ಷೇತ್ರ ಜಾರ್ಖಂಡ್‌ನ ಸಮ್ಮೇದ ಶಿಖರ್ಜಿ, ಜೈನ ಧರ್ಮದ 20 ಮಂದಿ ಜೈನ ತೀರ್ಥಂಕರರು ಮೋಕ್ಷವನ್ನು ಪಡೆದ ಕ್ಷೇತ್ರವಾಗಿದೆ. ಜಾರ್ಖಂಡ್ ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರವು ಐತಿಹಾಸಿಕ, ಪೌರಾಣಿಕ, ಧಾರ್ಮಿಕ ಮಹತ್ವವುಳ್ಳ ಲಕ್ಷಾಂತರ ವರ್ಷಗಳ ಇತಿಹಾಸ, ನಂಬಿಕೆ ಇರುವಂತಹ ಹಾಗೂ ವಿಶ್ವದಾದ್ಯಂತ ಕೊಟ್ಯಾಂತರ ಭಕ್ತರನ್ನು ಹೊಂದಿರುವ ಕ್ಷೇತ್ರವನ್ನು ಹಾಳು ಮಾಡುವುದು ಸರಿಯಲ್ಲ ಎಂದರು.

ಮೊಗಲ್ ದೊರೆಗಳಾದ ಅಕ್ಬರ್ ಹಾಗೂ ಜಹಾಂಗೀರ್ ಸಹಿತ ಬ್ರಿಟಿಷರ ಆಡಳಿತ ಕಾಲದಲ್ಲೂ ಈ ಪರ್ವತದ ಪಾವಿತ್ರ್ಯತೆಗೆ ಧಕ್ಕೆಯಾಗದಂತೆ ಫರ್ಮಾನು ಹೊರಡಿಸಿ ಕ್ರಮಕೈಗೊಂಡ ಉಲ್ಲೇಖವಿದೆ. ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಯ ಸರಕಾರ ಬಂದ ಮೇಲೆ ಇದನ್ನು ಪರ್ಯಟನಾ ಸ್ಥಳವೆಂದು ಘೋಷಿಸಿ ಪಾವಿತ್ರ್ಯಕ್ಕೆ ದಕ್ಕೆ ತರುವ ಕೆಲಸವಾಗುತ್ತಿರುವುದು ಸರಿಯಲ್ಲ. ಅಲ್ಪಸಂಖ್ಯಾತರಲ್ಲಿ ಅಲ್ಪಸಂಖ್ಯಾತರಾದ ಜೈನರ ತೀರ್ಥಕ್ಷೇತ್ರದ ವಿಚಾರದಲ್ಲಿ ಅಭದ್ರತೆಯ ವಾತಾವರಣ ನಿರ್ಮಿಸುತ್ತಿರುವುದು ಸರಿಯಲ್ಲ ಎಂದರು.

ಈ ಪವಿತ್ರ ಸ್ಥಳವನ್ನು ಪ್ರವಾಸಿ ತಾಣವನ್ನಾಗಿ ಘೋಷಿಸುವ ಮೂಲಕ ಅಪವಿತ್ರಗೊಳಿಸುವ ಹುನ್ನಾರ ಮಾಡಲಾಗುತ್ತಿದೆ. ಸಮ್ಮೇದಾಚಲ ಪರ್ವತ ಪರ್ಯಟನಾ ಸ್ಥಳವಾಗದೆ ಜೈನರ ಪವಿತ್ರ ತೀರ್ಥಕ್ಷೇತ್ರವಾಗಿ ಘೋಷಿಸಿ ಅದನ್ನು ಹಾಗೆಯೇ ಉಳಿಸಬೇಕು. ಇಲ್ಲಿನ ಪಾವಿತ್ರ್ಯತೆ ಕಾಪಾಡುವ ಜವಾಬ್ದಾರಿ ಹಾಗೂ ಮುತುವರ್ಜಿಯನ್ನು ಸರಕಾರಗಳು ತೋರಬೇಕು ಎಂದು ಸಭೆಯನ್ನುದ್ದೇಶಿಸಿ ಮಾತನಾಡಿದ ಭಾಷಣಕಾರರು ಆಗ್ರಹಿಸಿದರು.

ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಆಕಾಶ್‌ರಾಜ್ ಜೈನ್ ಮಾತನಾಡಿ, ಇದು ಅಹಿಂಸಾತ್ಮಕ ಸಾಂಕೇತಿಕ ಪ್ರತಿಭಟನೆಯಾಗಿದ್ದು, ಸರಕಾರ ಇದನ್ನು ಪುರಸ್ಕರಿಸಬೇಕು. ಕರ್ನಾಟಕಕ್ಕೂ ಸಮ್ಮೇದ ಪರ್ವತಕ್ಕೂ ಇರುವ ಸಂಬಂಧಕ್ಕೆ ಹಲವು ವರ್ಷಗಳ ಇತಿಹಾಸವಿದೆ. ರಾಜ್ಯ ಸರಕಾರ ಕೂಡ ಸಮ್ಮೇದಾಚಲ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಅನುದಾನ, ರೈಲು ವ್ಯವಸ್ಥೆ ಜೊತೆಗೆ ಯಾತ್ರಿನಿವಾಸ ನಿರ್ಮಾಣದ ವಿಚಾರದಲ್ಲಿ ಅಲ್ಲಿನ ಸರಕಾರದ ಜೊತೆ ಮಾತುಕತೆ ನಡೆಸಿ ಕ್ರಮವಹಿಸಬೇಕು ಎಂದವರು ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಪ್ರತಿಭಟನಾ ಸ್ಥಳಕ್ಕೆ ಬಂದ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಅವರ ಮೂಲಕ ರಾಷ್ಟ್ರಪತಿ, ಪ್ರಧಾನ ಮಂತ್ರಿ ಹಾಗೂ ಜಾರ್ಖಂಡ್ ರಾಜ್ಯ ಸರಕಾರಗಳಿಗೆ ಈ ಸಂಬಂಧ ಮನವಿ ಸಲ್ಲಿಸಲಾಯಿತು.

ಜೈನ ಸಮುದಾಯದ ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ಪ್ರೇಮ್ ಕುಮಾರ್ ಹೊಸ್ಮಾರು, ಮಹಾವೀರ ಜೈನ್ ಅಂಡಾರು, ಡಾ. ಆಕಾಶ್ ರಾಜ್ ಜೈನ್, ಭರತ್‌ರಾಜ್ ಜೈನ್, ವಿಜಯಕುಮಾರ್ ಜೈನ್, ಯೋಗರಾಜ್ ಶಾಸ್ತ್ರಿ, ಕಾರ್ಕಳ ಜೈನ್ ಮಿಲನ್ ಅಧ್ಯಕ್ಷೆ ಮಾಲತಿ ವಸಂತರಾಜ್, ಸುನಿಲ್ ಕುಮಾರ್ ಜೈನ್ ಮಾತನಾಡಿದರು.

ಉಡುಪಿ ಜೈನ್ ಮಿಲನ್ ಅಧ್ಯಕ್ಷೆ ದೀಪಾ ರಾಜೇಶ್, ವಿವಿಧ ಪ್ರದೇಶಗಳ ಜೈನ್ ಮಿಲನ್ ಅಧ್ಯಕ್ಷರಾದ ನೀತು ಜೈನ್, ಪುಷ್ಪರಾಜ್ ಜೈನ್, ಜೈನ ಪುರೋಹಿತ ಸಂಘದ ಸುರೇಂದ್ರ ಇಂದ್ರ, ಸಿಂಹಸೇನ ಇಂದ್ರ, ಸನ್ಮಿತ್ರ ಸಂಘದ ಶೀತಲ್ ಜೈನ್, ದ.ಕ ಜೈನ ಯುವ ಸಂಘದ ಪಾರ್ಶ್ವನಾಥ ಜೈನ್, ನಾರಾವಿ ಅಜಿತ್ ಕುಮಾರ್ ಜೈನ್, ರಂಜಳ ಸತೀಶ್ ಕುಮಾರ, ಶಾಂತಿರಾಜ್, ಪ್ರಸನ್ನ ಕುಮಾರ, ಸುಕೀರ್ತಿ, ಯಶೋಧಾ ಅಲ್ಲದೇ ಉಡುಪಿ, ಕಾರ್ಕಳ, ಬಜಗೋಳಿ, ಹೊಸ್ಮಾರು, ಶಿರ್ಶಾಲು, ರೆಂಜಾಳ, ಇರ್ವತ್ತೂರು, ಅಳಿಯೂರು, ನಾರಾವಿ, ಅಜೆಕಾರು, ವರಂಗ, ಹಟ್ಟಿಯಂಗಡಿ, ಬೋಳ, ಮಾಳ, ಮೂಡಾರು, ನಲ್ಲೂರು ಪ್ರದೇಶಗಳಿಂದ ಜೈನ ಸಮಾಜದವರು, ಬಸದಿಗಳ ಪ್ರಮುಖರು, ಶ್ರಾವಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Similar News

ನಾಪತ್ತೆ