×
Ad

ಕಾಸರಗೋಡು: ಯುವತಿಯ ಸಾಮೂಹಿಕ ಅತ್ಯಾಚಾರ; ಮೂವರು ಆರೋಪಿಗಳ ಬಂಧನ

Update: 2022-12-21 19:24 IST

ಕಾಸರಗೋಡು: 19 ರ ಹರೆಯದ ಯುವತಿಗೆ ಮಾದಕ ವಸ್ತು ನೀಡಿ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆನ್ನಲಾದ ಘಟನೆಯೊಂದು ವಿದ್ಯಾನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಈ ಸಂಬಂಧ ಮೂವರು ಆರೋಪಿಗಳನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ.

ಮಧೂರು ಪಟ್ಲದ ಜೆ. ಶೈನಿತ್ ಕುಮಾರ್ (30), ಉಪ್ಪಳ ಮಂಗಲ್ಪಾಡಿಯ ಮೋಕ್ಷಿತ್ ಶೆಟ್ಟಿ (43) ಮತ್ತು ಉಳಿಯತ್ತಡ್ಕದ ಎನ್. ಪ್ರಶಾಂತ್ (27) ಬಂಧಿತರು ಆರೋಪಿಗಳು. ಕಾಸರಗೋಡು ಮಹಿಳಾ ಠಾಣಾ ಇನ್ಸ್ ಪೆಕ್ಟರ್ ಪಿ. ಚಂದ್ರಿಕಾ ನೇತೃತ್ವದ ತಂಡವು ಆರೋಪಿಗಳನ್ನು ಬಂಧಿಸಿದೆ. ಮಧ್ಯವರ್ತಿಯಾಗಿದ್ದ ಆರೋಪದಲ್ಲಿ ಕಾಞ೦ಗಾಡಿನ ಮಹಿಳೆಯೋರ್ವಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

ಆರ್ಥಿಕವಾಗಿ ಹಿಂದುಳಿದ ಕುಟುಂಬದ ಯುವತಿಗೆ ಆಮಿಷ ತೋರಿಸಿ ತಂಡವು ಈ ಕೃತ್ಯ ನಡೆಸಿದ್ದು, ಪಾನೀಯದಲ್ಲಿ ಮಾದಕ ವಸ್ತು ಬೆರೆಸಿ ನೀಡಿ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.

ನೆರೆಮನೆಯ ಯುವಕನೋರ್ವ ಪ್ರೀತಿಸುವ ನಾಟಕವಾಡಿ ಬಳಿಕ ವಿವಾಹವಾಗುವ ಭರವಸೆ ನೀಡಿ ವಿವಿಧೆಡೆಗೆ ಕರೆದೊಯ್ದು ಯುವತಿಯ ಅತ್ಯಾಚಾರ ನಡೆಸಿದ್ದಾನೆ. ಅಲ್ಲದೆ   ಮಧ್ಯವರ್ತಿಯಾದ ಮಹಿಳೆ ಮೂಲಕ ಇತರರಿಗೂ ಯುವತಿಯನ್ನು ಒಪ್ಪಿಸಿದ್ದು ಸಾಮೂಹಿಕ ಅತ್ಯಾಚಾರ ನಡೆಸಿರುವುದಾಗಿ ಆರೋಪಿಸಲಾಗಿದೆ.

ಕಾಸರಗೋಡು , ಮಂಗಳೂರು , ಚೆರ್ಕಳ , ತ್ರಿಶೂರ್ ಮೊದಲಾದೆಡೆಗಳಲ್ಲಿನ ವಸತಿಗೃಹಗಳಲ್ಲಿ ತಂಗಿ ಅತ್ಯಾಚಾರ ನಡೆಸಲಾಗಿದೆ. ನಿರಂತರವಾಗಿ ಅತ್ಯಾಚಾರಕ್ಕೊಳಗಾದ ಯುವತಿಗೆ ಮಾನಸಿಕ - ಅರೋಗ್ಯ ಸಮಸ್ಯೆ ತಲೆದೋರಿದ್ದು, ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ ಕೌನ್ಸಿಲಿಂಗ್ ನಡೆಸಿದ್ದು, ಈ ಸಂದರ್ಭದಲ್ಲಿ ಬೆಚ್ಚಿ ಬೀಳಿಸುವ
ಮಾಹಿತಿಗಳು ಹೊರಬಿದ್ದಿವೆ ಎಂದು ತಿಳಿದು ಬಂದಿದೆ.

ಬಳಿಕ  ಪೊಲೀಸರು ಯುವತಿಯಿಂದ ಮಾಹಿತಿ ಪಡೆದು ತನಿಖೆ ನಡೆಸಿದ್ದರು.

Similar News