ಕಾಪು: ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣದ ಬಗ್ಗೆ ಡಿಕೆಶಿ ಹೇಳಿಕೆ ಖಂಡಿಸಿ ಪ್ರತಿಭಟನೆ

Update: 2022-12-21 14:18 GMT

ಕಾಪು: ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣದ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ನೀಡಿರುವ ಹೇಳಿಕೆಯನ್ನು ಖಂಡಿಸಿ ಕಾಪು ಕ್ಷೇತ್ರ ಬಿಜೆಪಿ ಕಛೇರಿ ಮುಂಭಾಗದಲ್ಲಿ ಬುಧವಾರ ಪ್ರತಿಭಟನೆ ನಡೆಯಿತು. 

ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಸುರೇಶ್ ಪಿ. ಶೆಟ್ಟಿ ಗುರ್ಮೆ ಮಾತನಾಡಿ, ಮಂಗಳೂರಿನ ಕುಕ್ಕರ್ ಸ್ಪೋಟ ಪ್ರಕರಣ ಮತ್ತು ಕೊಯಮತ್ತೂರು ಸ್ಪೋಟ ಪ್ರಕರಣಕ್ಕೂ ಪರಸ್ಪರ ಸಾಮ್ಯತೆಯಿದ್ದು, ಇದನ್ನು ಎಲ್ಲರೂ ಖಂಡಿಸಿದ್ದಾರೆ. ಆದರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಈ ಬಗ್ಗೆ ಲಘುವಾಗಿ ಮಾತನಾಡಿ, ಜನರನ್ನು ಹಾದಿ ತಪ್ಪಿಸುವ ಹೇಳಿಕೆ ನೀಡಿದ್ದಾರೆ ಎಂದರು. 

ಕಾಪು ಮಂಡಲ ಬಿಜೆಪಿ ಅಧ್ಯಕ್ಷ ಶ್ರೀಕಾಂತ ನಾಯಕ್ ಮಾತನಾಡಿ, ದೇಶ, ಧರ್ಮದ ಬಗ್ಗೆ ಒಲವಿಲ್ಲದೇ ಕೇವಲ ಪಕ್ಷ ಮತ್ತು ಪಕ್ಷದ ನಾಯಕರು ಹಾಗೂ ಮುಸ್ಲಿಂ ಸಮುದಾಯದ ಓಲೈಕೆಗಾಗಿ ರಾಜಕೀಯ ನಡೆಸುತ್ತಿರುವ ಕಾಂಗ್ರೆಸ್ ಪಕ್ಷದ ಮುಖಂಡರು ದಿನಕ್ಕೊಂದು ಬಾರಿ ರಾಷ್ಟ್ರೀಯತೆಯನ್ನು ಅಪಮಾನಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಇಂತಹ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸದಿದ್ದಲ್ಲಿ ಅವರ ಮನೆಯ ಮುಂದೆ ಪ್ರತಿಭಟನೆ ನಡೆಸಲೂ ಪಕ್ಷ ಹಿಂಜರಿಯಲಾರದು ಎಂದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಹಿಂದುಳಿದ ವರ್ಗ ಮೋರ್ಚಾ ಜಿಲ್ಲಾಧ್ಯಕ್ಷ ಸುರೇಂದ್ರ ಪಣಿಯೂರು, ರೈತ ಮೋರ್ಚ ಜಿಲ್ಲಾಧ್ಯಕ್ಷ ಪ್ರವೀಣ್ ಕುಮಾರ್ ಗುರ್ಮೆ, ಜಿಲ್ಲಾ ಫಲಾನುಭವಿ ಪ್ರಕೋಷ್ಠದ ಸಂಚಾಲಕ ದಿಲ್ಲೇಶ್ ಶೆಟ್ಟಿ, ಕಾಪು ಮಂಡಲ ಯುವ ಮೋರ್ಚ ಅಧ್ಯಕ್ಷ ಸಚಿನ್ ಸುವರ್ಣ, ಕಾಪು ಮಂಡಲ ಮಹಿಳಾ ಮೋರ್ಚ ಅಧ್ಯಕ್ಷೆ ಸುಮಾ ಶೆಟ್ಟಿ, ಕಾಪು ಮಂಡಲ ಕಾರ್ಯದರ್ಶಿಗಳಾದ ರಾಜೇಶ್ ಕುಂದರ್, ಮಾಲಿನಿ ಶೆಟ್ಟಿ, ಲತಾ ಆಚಾರ್ಯ, ಕಾಪು ಮಂಡಲ ಉಪಾಧ್ಯಕ್ಷರಾದ ಸಂಧ್ಯಾ ಕಾಮತ್, ನವೀನ್ ಎಸ್.ಕೆ., ಚಂದ್ರ ಮಲ್ಲಾರು, ಪಲಿಮಾರು ಗ್ರಾಮ ಪಂಚಾಯಿತಿ  ಅಧ್ಯಕ್ಷೆ ಗಾಯತ್ರಿ ಪ್ರಭು, ಪುರಸಭಾ ಸದಸ್ಯರಾದ ಅನಿಲ್ ಕುಮಾರ್, ಸುರೇಶ್ ದೇವಾಡಿಗ, ಪಕ್ಷದ ಮಹಾಶಕ್ತಿ ಕೇಂದ್ರ, ಶಕ್ತಿ ಕೇಂದ್ರ, ವಿವಿಧ ಮೋರ್ಚಾ, ಪ್ರಕೋಷ್ಠಗಳ ವಿವಿಧ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

Similar News