×
Ad

ಫ್ರಾನ್ಸ್ ನ ಕಿಲಿಯನ್ ಎಂಬಾಪೆಯನ್ನು ಅಣಕಿಸಿದ ಅರ್ಜೆಂಟೀನ ಗೋಲ್ ಕೀಪರ್ ಮಾರ್ಟಿನೆಝ್: ನೆಟ್ಟಿಗರಿಂದ ತರಾಟೆ

Update: 2022-12-21 21:13 IST

ಬ್ಯೂನಸ್ ಐರಿಸ್: 36 ವರ್ಷಗಳ ನಂತರ ವಿಶ್ವಕಪ್ ಜಯಿಸಿದ ಅರ್ಜೆಂಟೀನ ತಂಡಕ್ಕೆ ತವರಿನಲ್ಲಿ ಅದ್ದೂರಿ ಸ್ವಾಗತ ನೀಡಲಾಯಿತು. ಲಕ್ಷಾಂತರ ಮಂದಿ ಅಭಿಮಾನಿಗಳು ವಿಜಯೋತ್ಸವದ ಪೆರೇಡ್‌ನಲ್ಲಿ ಭಾಗವಹಿಸಿದ್ದ ವಿಜೇತ ತಂಡದ ಸದಸ್ಯರನ್ನು ಹಾರ್ದಿಕವಾಗಿ ಅಭಿನಂದಿಸಿ, ಗೆಲುವಿನ ಸಂಭ್ರಮಾಚರಣೆ ಮಾಡಿದರು. ನಿರೀಕ್ಷೆಗೂ ಮೀರಿದ ಜನಸಾಗರ ಸೇರಿದ್ದರಿಂದ ವಿಜಯೋತ್ಸವ ಪೆರೇಡ್ ಅನ್ನು ಅರ್ಧಕ್ಕೆ ಮೊಟಕುಗೊಳಿಸಿ, ವಿಜೇತ ತಂಡದ ಸದಸ್ಯರನ್ನು ಹೆಲಿಕಾಪ್ಟರ್ ಮೂಲಕ ಪ್ರವಾಸ ಮಾಡಿಸಲಾಯಿತು. ಆದರೆ, ಇದೆಲ್ಲಕ್ಕಿಂತ ಹೆಚ್ಚು ಗಮನ ಸೆಳೆದಿದ್ದು ಅರ್ಜೆಂಟೀನ ಗೋಲ್ ಕೀಪರ್ ಎಮಿಲಿಯಾನೊ ಮಾರ್ಟಿನೆಝ್ ಫ್ರಾನ್ಸ್ ತಂಡದ ನಾಯಕ ಕಿಲಿಯನ್ ಎಂಬಾಪೆ ಚಿತ್ರ ಅಂಟಿಸಲಾಗಿದ್ದ ಮಗುವಿನ ಬೊಂಬೆಯನ್ನು ಹಿಡಿದು ಎಂಬಾಪೆಯನ್ನು ಅಣಕಿಸುವಂತೆ ವರ್ತಿಸಿದ್ದು. ಇದೀಗ ಈ ವಿಡಿಯೊ ವಿಶ್ವಾದ್ಯಂತ ವೈರಲ್ ಆಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಮಾರ್ಟಿನೆಝ್ ವರ್ತನೆ ತೀವ್ರ ಟೀಕೆಗೆ ಗುರಿಯಾಗಿದೆ.

ಈ ಕುರಿತು ಟ್ವೀಟ್ ಮಾಡಿರುವ ಅಭಿಮಾನಿಯೊಬ್ಬ, "ಘನತೆಯಿಲ್ಲದ ನಡತೆ ಇದು. ನೀವೀಗ ವಿಶ್ವ ಚಾಂಪಿಯನ್ ಆಗಿದ್ದು, ಅದಕ್ಕೆ ತಕ್ಕಂತೆ ವರ್ತಿಸಿ. ಈ ನಡವಳಿಕೆ ಸಂಪೂರ್ಣವಾಗಿ ಅನಪೇಕ್ಷಿತ. ಅಲ್ಲದೆ, ಆತ (ಎಂಬಾಪೆ) ನಿನ್ನನ್ನು ತಪ್ಪಿಸಿ ನಾಲ್ಕು ಗೋಲು ಹೊಡೆದ. ಹೀಗಾಗಿ ನಿನಗೆ ಆತನನ್ನು ಅಣಕಿಸುವ ಯಾವ ಹಕ್ಕೂ ಇಲ್ಲ" ಎಂದು ಟೀಕಿಸಿದ್ದಾನೆ.

"ಆತ ಮರ್ಯಾದೆಹೀನ ವ್ಯಕ್ತಿ ಮತ್ತು ಯಾವಾಗಲೂ ಗಮನ ಸೆಳೆಯಲು ಬಯಸುತ್ತಾನೆ" ಎಂದು ಮತ್ತೊಬ್ಬ ಅಭಿಮಾನಿ ಕಿಡಿ ಕಾರಿದ್ದಾನೆ.

ಇನ್ನೊಬ್ಬ ಅಭಿಮಾನಿ, "ಮೈದಾನದಲ್ಲಿ ಫ್ರಾನ್ಸ್ ಉತ್ಕೃಷ್ಟ ತಂಡ ಮತ್ತು ಎಂಬಾಪೆ ಉತ್ಕೃಷ್ಟ ಆಟಗಾರ. ಅರ್ಜೆಂಟೀನಾ ಕೇವಲ ಪೆನಾಲ್ಟಿ ಶೂಟೌಟ್‌ನಲ್ಲಿ ಜಯಿಸಿತು. ಎಂಬಾಪೆಯನ್ನು ಅಣಕಿಸಲು ಯಾವುದೇ ಕಾರಣವಿಲ್ಲ. ಆತ ಫೈನಲ್ ಪಂದ್ಯದಲ್ಲಿ ಮೂರು ಗೋಲು ಗಳಿಸಿದ. ಫೈನಲ್ ಪಂದ್ಯದ ವೇಳೆ ಫ್ರಾನ್ಸ್ ತಂಡದ ಮೂವರು ಆಟಗಾರರು ಗಾಯಗೊಂಡಿದ್ದರು. ಫ್ರಾನ್ಸ್ ಉತ್ಕೃಷ್ಟ ತಂಡವಾಗಿದ್ದು, ಅರ್ಜೆಂಟೀನ ಅದೃಷ್ಟ ಬಲದಿಂದ ಜಯಿಸಿದೆ" ಎಂದು ಟ್ವೀಟ್ ಮಾಡಿದ್ದಾನೆ.

Similar News