ಭಟ್ಕಳ: ಸಾಲಗಾರರ ಕ್ಷೇಮಾಭಿವೃದ್ಧಿ ಸಂಘದಿಂದ ಪುನೀತ್ ರಾಜ್‍ಕುಮಾರ್ ಹೆಸರಲ್ಲಿ ಆಶ್ರಯ ಮನೆ
ಭಟ್ಕಳ : ತಾಲ್ಲೂಕಿನ ಕೋಣಾರದ ಬೆಳೂರಮನೆಯಲ್ಲಿ ಮಹಿಳೆ ಮಂಜುಳಾ ಶೆಟ್ಟಿ ಮತ್ತು ಆಕೆಯ ಇಬ್ಬರು ಹೆಣ್ಣು ಮಕ್ಕಳ ವಾಸ್ತವ್ಯಕ್ಕಾಗಿ ಸಾಲಗಾರರ ಕ್ಷೇಮಾಭಿವೃದ್ಧಿ ಸಂಘ ವಿವಿಧ ದಾನಿಗಳ ಸಹಕಾರದಿಂದ ನಿರ್ಮಿಸಿದ ಪುನೀತ್‍ರಾಜಕುಮಾರ ಆಶ್ರಯಮನೆಯನ್ನು ಮಾಜಿ ಶಾಸಕ ಜೆ ಡಿ ನಾಯ್ಕ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಸಾಲಗಾರರ ಕ್ಷೇಮಾಭಿವೃದ್ಧಿ ಸಂಘದವರು ಬಡ ಮಹಿಳೆ ಮತ್ತು ಆಕೆಯ ಇಬ್ಬರು ಹೆಣ್ಣುಮಕ್ಕಳು ವಾಸ್ತವ್ಯ ಮಾಡಲು ಹೊಸ ಮನೆ ನಿರ್ಮಿಸಿಕೊಡುವುದರ ಮೂಲಕ ಉತ್ತಮ ಕಾರ್ಯ ಮಾಡುವುದರೊಂದಿಗೆ ಮಾನವೀಯತೆ ಮೆರೆದಿದ್ದಾರೆ. ಇಂತಹ ಸಾಮಾಜಿಕ ಕಳಕಳಿಯ ಕೆಲಸ ಎಂದಿಗೂ ನೆನಪಿನಲ್ಲಿರುತ್ತದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಸಾಗರ ಚೈತನ್ಯ ಟ್ರಸ್ಟಿನ ಅಧ್ಯಕ್ಷ ಕೆ ಎಸ್ ಪ್ರಶಾಂತ ಮಾತನಾಡಿ, ಮೇರುನಟ ಪುನೀತ್‍ರಾಜಕುಮಾರ ಹೆಸರಿನಲ್ಲಿ ಬಡಮಹಿಳೆಯೊರ್ವಳಿಗೆ ಸೂರು ಕಲ್ಪಿಸಿರುವ ಸಾಲಗಾರರ ಸಂಘ ಕಾರ್ಯ ಶ್ಲಾಘನೀಯ ಎಂದರು. ಅಧ್ಯಕ್ಷತೆ ವಹಿಸಿದ್ದ ಅರ್ಬನ್ ಬ್ಯಾಂಕಿನ ಉಪಾಧ್ಯಕ್ಷ ಎಂ ಆರ್ ನಾಯ್ಕ ಮಾತನಾಡಿ, ಸಾಲಗಾರರ ಸಂಘ ಮಾನವೀಯ ಕಾರ್ಯವನ್ನು ಮಾಡಿದೆ. ಮನೆ ನಿರ್ಮಿಸಿಕೊಡುವ ಕೆಲಸ ಸುಲಭದ್ದಲ್ಲ ಎಂದ ಅವರು ಸಾಲಗಾರರ ಸಂಘ ಸೋತವರಿಗೆ ನೆರವು ನೀಡುವ ಕೆಲಸ ಮಾಡಿರುವುದು ಬಹಳ ಖುಷಿ ತಂದಿದೆ. ಯಾವುದೇ ಸಹಕಾರಿ ಸಂಘ ಮತ್ತು ಬ್ಯಾಂಕುಗಳಿರಲಿ ಸಾಲಗಾರರಿಗೆ ವಿಮೆ ಮಾಡಿಸುವುದು ಖಡ್ಡಾಯ ಮಾಡಬೇಕಿದೆ. ಹೀಗೆ ಮಾಡುವುದರಿಂದ ಮುಂದೊಂದು ದಿನ ಸಾಲಗಾರರರ ಕುಟುಂಬದವರಿಗೆ ಹೊರೆ ಕಡಿಮೆಯಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಾಲಗಾರರ ಸಂಘದ ಉಪಾಧ್ಯಕ್ಷ ಎಂ ಡಿ ನಾಯ್ಕ, ಕೋಣಾರ ಗ್ರಾ.ಪಂ. ಸದಸ್ಯ ಗೋವಿಂದ ನಾಯ್ಕ ಮಾತನಾಡಿದರು. ವೇದಿಕೆಯಲ್ಲಿ ಪುರಸಭೆ ಸದಸ್ಯ ಪಾಸ್ಕಲ ಗೋಮ್ಸ, ಸಾಲಗಾರರರ ಸಂಘದ ಕಾರ್ಯದರ್ಶಿ ಸುರೇಶ ಪೂಜಾರಿ, ಸಂಜೀವ ಆಚಾರಿ,ಆಸೀಪ್, ವೆಂಕಟೇಶ ನಾಯ್ಕ, ಸತೀಶ ಆಚಾರಿ ಮುಂತಾದವರಿದ್ದರು. ಸಂಜನಾ ಸಂಸ್ಥೆಯ ನಾಗರಾಜ ಮೊಗೇರ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು. ಇದೇ ಸಂದರ್ಭದಲ್ಲಿ ಸಾಲಗಾರರ ಸಂಘದ ಅಧ್ಯಕ್ಷ ಗಣಪತಿ ನಾಯ್ಕ ಮತ್ತು ಉಪಾಧ್ಯಕ್ಷ ಎಂ ಡಿ ನಾಯ್ಕರನ್ನು ಮಂಜುಳಾ ಶೆಟ್ಟಿ ಕುಟುಂಬದವರು ಗೌರವಿಸಿದರು.