ಅಮೆರಿಕದ ಹಣ ದಾನವಲ್ಲ, ಹೂಡಿಕೆ: ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ

Update: 2022-12-22 17:32 GMT

ವಾಷಿಂಗ್ಟನ್, ಡಿ.22: ಅಮೆರಿಕವು ಉಕ್ರೇನ್ ಗೆ ನೀಡಿರುವ ನೆರವಿನ ನಿಧಿ ದಾನವಲ್ಲ, ಅದು ಜಾಗತಿಕ ಭದ್ರತೆ ಮತ್ತು ಪ್ರಜಾಪ್ರಭುತ್ವದಲ್ಲಿ ಹೂಡಿಕೆಯಾಗಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ(Volodymyr Zelensky) ಹೇಳಿದ್ದಾರೆ.

ರಶ್ಯ ವಿರುದ್ಧದ ಯುದ್ಧದಲ್ಲಿ ನಿರಂತರ ಬೆಂಬಲ ನೀಡಿದ ನಾಯಕರಿಗೆ ಧನ್ಯವಾದ ಹೇಳಲು ಉಕ್ರೇನ್ ಬುಧವಾರ ಅಮೆರಿಕಕ್ಕೆ ಭೇಟಿ ನೀಡಿದರು. ಈ ಸಂದರ್ಭ ಮಾತನಾಡಿದ ಅವರು, ಯುದ್ಧ ಕೊನೆಗೊಳ್ಳಬೇಕೆಂಬುದು ಎಲ್ಲರ ಆಶಯವಾಗಿದೆ, ಆದರೆ ಹಾಗೆಂದು ಈ ವಿಷಯದಲ್ಲಿ ಯಾವುದೇ ರಾಜಿ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಬಳಿಕ ಅವರು ಶ್ವೇತಭವನದಲ್ಲಿ ಅಮೆರಿಕದ ಅಧ್ಯಕ್ಷ ಜೋ ಬೈಡನ್(Joe Biden) ರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ನಾವು ಶಾಂತಿ ಬಯಸುತ್ತಿದ್ದೇವೆ. ಈ ನಿಟ್ಟಿನಲ್ಲಿ ನಾವು ಈಗಾಗಲೇ ಮುಂದಿರಿಸಿರುವ ಪ್ರಸ್ತಾವನೆಗಳನ್ನು ಅಧ್ಯಕ್ಷ ಬೈಡನ್ರ ಎದುರು ಇರಿಸಿದ್ದೇನೆ. ನಮ್ಮ ಶಾಂತಿ ಸೂತ್ರಗಳನ್ನು ಮುಂದಿನ ಹತ್ತು ವರ್ಷದವರೆಗೆ ನಮ್ಮ ಜಂಟಿ ಭದ್ರತಾ ಖಾತರಿಗಾಗಿ ಜಾರಿಗೆ ತರಬೇಕು ಎಂದವರು ಹೇಳಿದ್ದಾರೆ.
ಭಯೋತ್ಪಾದಕ ರಾಷ್ಟ್ರವಾಗಿರುವ ರಶ್ಯದಿಂದ ಶಾಂತಿಯತ್ತ ಹೆಜ್ಜೆಗಳನ್ನು ನಿರೀಕ್ಷಿಸುವುದು ಮುಗ್ಧತೆಯಾಗುತ್ತದೆ. ರಶ್ಯದ ಕ್ಷಿಪಣಿ ನಮ್ಮ ಮೇಲೆ ಎರಗಿದರೆ, ನಮ್ಮನ್ನು ರಕ್ಷಿಸಿಕೊಳ್ಳಲು ನಮ್ಮಿಂದ ಸಾಧ್ಯವಾದುದೆಲ್ಲವನ್ನೂ ನಾವು ಮಾಡುತ್ತೇವೆ. ಈ ಹೋರಾಟವು ನಮ್ಮ ಮಕ್ಕಳು ಮತ್ತು ಮೊಮ್ಮಕ್ಕಳು, ನಂತರ ಅವರ ಮಕ್ಕಳು ಮತ್ತು ಮೊಮ್ಮಕ್ಕಳು ಯಾವ ಜಗತ್ತಿನಲ್ಲಿ ಬದುಕುತ್ತಾರೆ ಎಂಬುದನ್ನು ವ್ಯಾಖ್ಯಾನಿಸುತ್ತದೆ.

ಅಧ್ಯಕ್ಷನಾಗಿ ನನಗೆ ನನ್ನ ದೇಶದ ಸಾರ್ವಭೌಮತೆ, ಸ್ವಾತಂತ್ರ್ಯ ಮತ್ತು ಪ್ರಾದೇಶಿಕ ಸಮಗ್ರತೆ ಮುಖ್ಯವಾಗಿದೆ. ರಶ್ಯದ ಆಕ್ರಮಣದಿಂದ ಉಂಟಾದ ಎಲ್ಲಾ ಹಾನಿಗಳಿಗೆ ಮರುಪಾವತಿಗೆ ಸಂಬಂಧಿಸಿ ಯಾವುದೇ ರಾಜಿಯ ಪ್ರಶ್ನೆಯೇ ಇಲ್ಲ ಎಂದು ಝೆಲೆನ್ಸ್ಕಿ ಹೇಳಿದ್ದಾರೆ.

ನೀವು ಒಬ್ಬಂಟಿಯಲ್ಲ: ಝೆಲೆನ್ಸ್ಕಿಗೆ ಬೈಡನ್ ಭರವಸೆ

ಯುದ್ಧದಿಂದ ಜರ್ಝರಿತಗೊಂಡಿರುವ ಉಕ್ರೇನ್ ಗೆ ಅಮೆರಿಕದ ಬೆಂಬಲವನ್ನು ಪುನರುಚ್ಚರಿಸಿದ ಅಧ್ಯಕ್ಷ ಜೋ ಬೈಡನ್, ನೀವು ಒಬ್ಬಂಟಿಯಲ್ಲ ಎಂದು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿಗೆ ಭರವಸೆ ನೀಡಿದ್ದಾರೆ.
ಅಮೆರಿಕಕ್ಕೆ ಭೇಟಿ ನೀಡಿರುವ ಝೆಲೆನ್ಸ್ಕಿ ಜತೆ ವಾಷಿಂಗ್ಟನ್ನಲ್ಲಿ ಜಂಟಿ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಬೈಡನ್, ಜತೆಯಾಗಿ ನಾವು ಸ್ವಾತಂತ್ರ್ಯದ ಜ್ವಾಲೆಯನ್ನು ಪ್ರಕಾಶಮಾನವಾಗಿ ಪ್ರಜ್ವಲಿಸುತ್ತೇವೆ ಮತ್ತು ಈ ಜ್ಯೋತಿ ನಂದಾದೀಪವಾಗಿ ಕತ್ತಲೆಯನ್ನು ಕಳೆಯಲಿದೆ ಎಂದರು.
ಎಲ್ಲಿಯವರೆಗೆ ಬೇಕಾದರೂ ಉಕ್ರೇನಿಯನ್ನರನ್ನು ಬೆಂಬಲಿಸಲು ಅಮೆರಿಕ ಬದ್ಧವಾಗಿದೆ. ಅಮೆರಿಕದ ಜನತೆ ಪ್ರತೀ ಹೆಜ್ಜೆಯಲ್ಲೂ ನಿಮ್ಮೊಂದಿಗಿದ್ದಾರೆ. ಯುದ್ಧ ಎಷ್ಟೇ ಸಮಯ ಮುಂದುವರಿಯಲಿ, ನಿಮ್ಮೊಂದಿಗೆ ನಾವಿರುತ್ತೇವೆ ಎಂದ ಬೈಡನ್, ಯುದ್ಧ ಆರಂಭವಾದಂದಿನಿಂದಲೂ ಉಕ್ರೇನ್ ಅಧ್ಯಕ್ಷರ ಜತೆ ನಿರಂತರ ಸಂಪರ್ಕದಲ್ಲಿದ್ದೆವು. ಆದರೆ ವೈಯಕ್ತಿಕವಾಗಿ ಮಾತುಕತೆ ನಡೆಸಿರುವುದು ಅರ್ಥಗರ್ಭಿತವಾಗಿದೆ ಎಂದರು.


ಉಕ್ರೇನ್ ಗೆ ಘೋಷಿಸಿರುವ 1.85 ಶತಕೋಟಿ ಡಾಲರ್ ಭದ್ರತಾ ನೆರವಿನ ಭಾಗವಾಗಿ ರಶ್ಯದ ವೈಮಾನಿಕ ದಾಳಿಯನ್ನು ಎದುರಿಸಲು ಉಕ್ರೇನ್ ಗೆ ಪೇಟ್ರಿಯಾಟ್ ಕ್ಷಿಪಣಿ ವ್ಯವಸ್ಥೆಯನ್ನು ಒದಗಿಸುವುದಾಗಿ ಅಮೆರಿಕ ವಾಗ್ದಾನ ನೀಡಿದೆ. ಇದು ಕ್ರೂಸ್ ಕ್ಷಿಪಣಿಗಳು, ಅಲ್ಪಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿ, ಯುದ್ಧವಿಮಾನಗಳನ್ನು ಈ ಹಿಂದೆ ಒದಗಿಸಿದ ವಾಯುರಕ್ಷಣಾ ವ್ಯವಸ್ಥೆಗಿಂತ ಗಮನಾರ್ಹವಾಗಿ ಹೆಚ್ಚಿನ ಪ್ರಮಾಣದಲ್ಲಿ ಹೊಡೆದುರುಳಿಸುವ ಸಾಮರ್ಥ್ಯ ಹೊಂದಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಹೇಳಿದ್ದಾರೆ.


ಝೆಲೆನ್ಸ್ಕಿಗೆ ಅಮೆರಿಕ ಸಂಸತ್ತಿನ ಗೌರವ

ಬುಧವಾರ ವಾಷಿಂಗ್ಟನ್ನಲ್ಲಿ ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡುವ ಮೊದಲು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿಯವರನ್ನು ಅಮೆರಿಕದ ಸಂಸದರು ಎದ್ದುನಿಂತು 2 ನಿಮಿಷಕ್ಕೂ ಹೆಚ್ಚುಹೊತ್ತು ಕರತಾಡನದೊಂದಿಗೆ ಸ್ವಾಗತಿಸಿದರು.
ಅಮೆರಿಕದ ಸಂಸತ್ತಿನಲ್ಲಿ ಇರುವುದು ಮತ್ತು ಸಂಸತ್ತನ್ನು ಉದ್ದೇಶಿಸಿ ಮಾತನಾಡುವುದು ತನಗೆ ದೊರೆತ ಗೌರವವಾಗಿದೆ. ಎಲ್ಲಾ ವಿನಾಶ, ಅಂಧಕಾರದ ಪರಿಸ್ಥಿತಿಯಲ್ಲಿಯೂ ಉಕ್ರೇನ್ ತನ್ನ ಚೈತನ್ಯವನ್ನು ಕಳೆದುಕೊಂಡಿಲ್ಲ, ಉಕ್ರೇನ್ ಜೀವಂತವಾಗಿದೆ ಎಂದು ಝೆಲೆನ್ಸ್ಕಿ ಹೇಳಿದರು. ಫೆಬ್ರವರಿಯಲ್ಲಿ ಉಕ್ರೇನ್ ಮೇಲೆ ರಶ್ಯ ಆಕ್ರಮಣ ನಡೆಸಿದ ಬಳಿಕ ಝೆಲೆನ್ಸ್ಕಿ ವಿದೇಶಕ್ಕೆ ನೀಡಿರುವ ಪ್ರಪ್ರಥಮ ಭೇಟಿ ಇದಾಗಿದೆ.

ಬೈಡನ್, ಝೆಲೆನ್ಸ್ಕಿ ರಶ್ಯದ ಕಳವಳಕ್ಕೆ ಕಿವಿಗೊಡುತ್ತಿಲ್ಲ: ಪೆಸ್ಕೋವ್ 

ರಶ್ಯದ ಕಳವಳವನ್ನು ಆಲಿಸಲು ಬೈಡನ್ ಮತ್ತು ಝೆಲೆನ್ಸ್ಕಿ ನಿರಾಕರಿಸುತ್ತಿದ್ದಾರೆ ಎಂದು ರಶ್ಯ ಅಧ್ಯಕ್ಷರ ವಕ್ತಾರ ಡಿಮಿಟ್ರಿ ಪೆಸ್ಕೋವ್ ಗುರುವಾರ ಹೇಳಿದ್ದಾರೆ.
ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಅಮೆರಿಕಕ್ಕೆ ನೀಡಿರುವ ಐತಿಹಾಸಿಕ ಭೇಟಿಯ ಬಗ್ಗೆ ಮಾಧ್ಯಮದವರ ಜತೆ ಪ್ರತಿಕ್ರಿಯಿಸಿದ ಪೆಸ್ಕೋವ್ ‘ಇದುವರೆಗೆ ಅಧ್ಯಕ್ಷ ಬೈಡನ್ ಅಥವಾ ಅಧ್ಯಕ್ಷ ಝೆಲೆನ್ಸ್ಕಿ ರಶ್ಯದ ಕಳವಳವನ್ನು ಆಲಿಸಲು ಸಂಭಾವ್ಯ ಸಿದ್ಧತೆ ಎಂದು ಗ್ರಹಿಸಬಹುದಾದ ಒಂದೇ ಒಂದು ಮಾತನ್ನೂ ಆಡಿಲ್ಲ ಎಂದು ಹೇಳಲು ವಿಷಾದವಾಗುತ್ತದೆ’ ಎಂದರು.

 ‘ಬೈಡನ್ ಅವರ ಸುದ್ಧಿಗೋಷ್ಟಿಯಲ್ಲಿ ಡೊನ್ಬಾಸ್ನ ನಗರಗಳು ಹಾಗೂ ಹಳ್ಳಿಗಳಲ್ಲಿನ ವಸತಿ ಕಟ್ಟಡಗಳ ಮೇಲೆ ಉಕ್ರೇನ್ ನಡೆಸುತ್ತಿರುವ ನಿರಂತರ ಶೆಲ್ ದಾಳಿಗಾಗಿ ಝೆಲೆನ್ಸ್ಕಿಗೆ ಎಚ್ಚರಿಕೆ ನೀಡುವ ಒಂದೇ ಒಂದು ಶಬ್ದವನ್ನೂ ನಾವು ಕೇಳಿಲ್ಲ. ಶಾಂತಿಗಾಗಿ ನಿಜವಾದ ಕರೆಗಳೂ ಇರಲಿಲ್ಲ. ಅಮೆರಿಕವು ಉಕ್ರೇನ್ ಅನ್ನು ಮುಂದಿಟ್ಟುಕೊಂಡು ರಶ್ಯದ ಜತೆ ಪರೋಕ್ಷ ಹೋರಾಟ ಮುಂದುವರಿಸಿರುವುದನ್ನು ಇದು ಸೂಚಿಸುತ್ತದೆ’ ಎಂದು ಪೆಸ್ಕೋವ್ ಹೇಳಿದ್ದಾರೆ.

Similar News