'ಜನಾಕ್ರೋಶ ಯಾತ್ರೆ' ರದ್ದುಗೊಳಿಸಿ ನಂತರ ಯುಟರ್ನ್ ಹೊಡೆದ ಬಿಜೆಪಿ

Update: 2022-12-23 09:23 GMT

ಜೈಪುರ: ಜನಾಕ್ರೋಶ ಯಾತ್ರೆಯ ಬಗ್ಗೆ ಇದ್ದ ಗೊಂದಲಗಳು ಪರಿಹಾರಗೊಂಡಿದ್ದು, ಅದರ ಬದಲು ನಿಗದಿಯಂತೆಯೆ ಪ್ರತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಜನಾಕ್ರೋಶ ಸಭೆಯನ್ನು ನಡೆಸಲು ನಿರ್ಧರಿಸಲಾಗಿದೆ ಎಂದು ರಾಜಸ್ತಾನ ಬಿಜೆಪಿ ರಾಜ್ಯಾಧ್ಯಕ್ಷ ಸತೀಶ್ ಪುನಿಯ ತಿಳಿಸಿದ್ದಾರೆ ಎಂದು ndtv.com ವರದಿ ಮಾಡಿದೆ.

"ರಾಜಸ್ತಾನದಲ್ಲಿನ ಕಾಂಗ್ರೆಸ್ ದುರಾಡಳಿತದ ವಿರುದ್ಧ ಬಿಜೆಪಿ ಡಿಸೆಂಬರ್ 1-14ರವರೆಗೆ ಜನಾಕ್ರೋಶ ಯಾತ್ರೆಯನ್ನು ಆಯೋಜಿಸಿತ್ತು. ಈ ಯಾತ್ರೆ ಮೂಲಕ ನಾವು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಎರಡು ಕೋಟಿ ಜನರನ್ನು ತಲುಪಿದ್ದೇವೆ" ಎಂದು ಅವರು ತಿಳಿಸಿದ್ದಾರೆ.

"ಈವರೆಗೆ ಜನಾಕ್ರೋಶ ಯಾತ್ರೆ 41 ವಿಧಾನಸಭಾ ಕ್ಷೇತ್ರಗಳನ್ನು ತಲುಪಿದೆ. ಆದರೆ, ಈವರೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಯಾವುದೇ ಮಾರ್ಗಸೂಚಿಗಳು ಪ್ರಕಟವಾಗದೆ ಇರುವುದರಿಂದ ಯಾತ್ರೆಯನ್ನು ಮುಂದುವರಿಸಬೇಕೊ ಅಥವಾ ಅಮಾನತುಗೊಳಿಸಬೇಕೊ ಎಂಬ ಕುರಿತು ಗೊಂದಲವುಂಟಾಗಿತ್ತು. ಆದರೀಗ ನಮ್ಮ ಸಾರ್ವಜನಿಕ ಸಭೆಗಳು ಮುಂದುವರಿಯಲಿವೆ" ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇದಕ್ಕೂ ಮುನ್ನ ಮುಂದಿನ ವರ್ಷ ರಾಜಸ್ತಾನದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ಮೇಲೆ ಕಣ್ಣಿಟ್ಟು, ರೈತರ ಸಮಸ್ಯೆ ಹಾಗೂ ಆಡಳಿತ ವೈಫಲ್ಯವನ್ನು ಮುಂದು ಮಾಡಿ ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಮಣಿಸಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ‌.ಪಿ. ನಡ್ಡಾ 'ಜನಾಕ್ರೋಶ ಯಾತ್ರೆ'ಯನ್ನು ಆಯೋಜಿಸಿದ್ದರು.

ಆದರೆ, ಹೊಸದಿಲ್ಲಿಯಲ್ಲಿ ಈ ಕುರಿತು ಹೇಳಿಕೆ ನೀಡಿದ್ದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್, "ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವುದರಿಂದ 'ಜನಾಕ್ರೋಶ ಯಾತ್ರೆ'ಯನ್ನು ಅಮಾನತುಗೊಳಿಸಲಾಗಿದೆ. ಬಿಜೆಪಿಗೆ ರಾಜಕೀಯಕ್ಕಿಂತ ಜನರು ಮುಖ್ಯ. ಅವರ ಆರೋಗ್ಯ ರಕ್ಷಣೆ ನಮ್ಮ ಆದ್ಯತೆ" ಎಂದು ತಿಳಿಸಿದ್ದರು.

Similar News