ಒಂದು ವಾರದ ಅವಧಿಯ ಮೇರೆಗೆ ಜೈಲಿನಿಂದ ಬಿಡುಗಡೆಗೊಂಡ ಉಮರ್‌ ಖಾಲಿದ್

Update: 2022-12-23 14:01 GMT

ಹೊಸದಿಲ್ಲಿ, ಡಿ. 23: ಸಹೋದರಿಯ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲು ಒಂದು ವಾರಗಳ ಮಧ್ಯಂತರ ಜಾಮೀನಿನಲ್ಲಿ ಸಾಮಾಜಿಕ ಹೋರಾಟಗಾರ ಉಮರ್ ಖಾಲಿದ್ ಶುಕ್ರವಾರ ಬೆಳಗ್ಗೆ ಕಾರಾಗೃಹದಿಂದ ಬಿಡುಗಡೆಯಾಗಿದ್ದಾರೆ ಎಂದು ಅವರ ಕುಟುಂಬ ತಿಳಿಸಿದೆ.

ಉಮರ್ ಖಾಲಿದ್ ಬೆಳಗ್ಗೆ 8.30ಕ್ಕೆ ಮನೆ ತಲುಪಿದರು. ಆದರೆ, ಮಾಧ್ಯಮದೊಂದಿಗೆ ಮಾತನಾಡಲು ಅವಕಾಶ ಇರಲಿಲ್ಲ ಎಂದು ಆತನ ತಂದೆ  ಇಲ್ಯಾಸ್ ತಿಳಿಸಿದ್ದಾರೆ.

ಸಹೋದರಿಯ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲು ಎರಡು ವಾರಗಳ ಜಾಮೀನು ಕೋರಿ ಉಮರ್ ಖಾಲಿದ್ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ದಿಲ್ಲಿ ನ್ಯಾಯಾಲಯ ಉಮರ್ ಖಾಲಿದ್ಗೆ ಡಿಸೆಂಬರ್ 12ರಂದು ಮಧ್ಯಂತರ ಜಾಮೀನು ನೀಡಿತ್ತು. ಆದರೆ, ಡಿಸೆಂಬರ್ 23ರಿಂದ ಡಿಸೆಂಬರ್ 30ರ ವರೆಗೆ ಒಂದು ವಾರಗಳ ಜಾಮೀನು ಮಾತ್ರ ನೀಡಿತ್ತು.

ಖಾಲಿದ್ ಅವರನ್ನು ದಿಲ್ಲಿ ಪೊಲೀಸರು 2020 ಡಿಸೆಂಬರ್ನಲ್ಲಿ ಬಂಧಿಸಿದ್ದರು. ಈಶಾನ್ಯ ದಿಲ್ಲಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯ ಬೆಂಬಲಿಗರು ಹಾಗೂ ವಿರೋಧಿಗಳ ನಡುವೆ 2020 ಫೆಬ್ರವರಿ 23 ಹಾಗೂ ಫೆಬ್ರವರಿ 26ರ ನಡುವೆ ನಡೆದ ಘರ್ಷಣೆಗೆ ಸಂಬಂಧಿಸಿದ ಈ ಪ್ರಕರಣದಲ್ಲಿ ಉಮರ್ ಖಾಲಿದ್ ವಿರುದ್ಧ ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. 

ಈ ಹಿಂಸಾಚಾರದಲ್ಲಿ 53 ಮಂದಿ ಸಾವನ್ನಪ್ಪಿದ್ದರು ಹಾಗೂ ನೂರಾರು ಮಂದಿ ಗಾಯಗೊಂಡಿದ್ದರು. ಮೃತಪಟ್ಟವರಲ್ಲಿ ಹೆಚ್ಚಿನವರು ಮುಸ್ಲಿಮರಾಗಿದ್ದರು.

ದಿಲ್ಲಿ ಪೊಲೀಸರು ಹಿಂಸಾಚಾರ  ಪ್ರಧಾನಿ ನರೇಂದ್ರ ಮೋದಿ ಅವರ ಸರಕಾರದ ವರ್ಚಸ್ಸಿಗೆ ಧಕ್ಕೆ ತರಲು ನಡೆಸಿದ ಪಿತೂರಿಯ ಭಾಗವಾಗಿದೆ ಹಾಗೂ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಖಾಲಿದ್ ಸೇರಿದಂತೆ ಪ್ರತಿಭಟನೆ ಆಯೋಜಿಸಿದವರಿಂದ ಹುಟ್ಟಿಕೊಂಡಿದೆ ಎಂದು ಪ್ರತಿಪಾದಿಸಿದ್ದರು.

ಪ್ರತಿಭಟನಕಾರರು ಪ್ರತ್ಯೇಕತಾವಾದಿ ಉದ್ದೇಶಗಳನ್ನು ಹೊಂದಿದ್ದರು. ಅವರು ಸರಕಾರಿವನ್ನು ಅಸ್ಥಿರಗೊಳಿಸಲು ನಾಗರಿಕ ಅಸಹಕಾರದ ಮುಖವಾಡವನ್ನು ಬಳಸಿದ್ದರು ಎಂದು ಕೂಡ ಅವರು ಪ್ರತಿಪಾದಿಸಿದ್ದಾರೆ. ಈ ಪಿತೂರಿಯ ಆರೋಪದ ಆಧಾರದಲ್ಲಿ ಪೊಲೀಸರು ಖಾಲಿದ್ ಸೇರಿದಂತೆ ಹಲವು ಸಾಮಾಜಿಕ ಹೋರಾಟಗಾರರು ಹಾಗೂ ವಿದ್ಯಾರ್ಥಿಗಳನ್ನು ಬಂಧಿಸಿದ್ದರು.

Similar News