ನೇಪಾಳ ಜೈಲಿನಿಂದ ಬಿಡುಗಡೆಗೊಂಡ ಸರಣಿ ಹಂತಕ ಚಾರ್ಲ್ಸ್ ಶೋಭರಾಜ್

Update: 2022-12-23 09:50 GMT

ಕಠ್ಮಂಡು: ಕಳೆದ ವಾರ ಸುಪ್ರೀಂಕೋರ್ಟ್ ನೀಡಿದ್ದ ಆದೇಶದನ್ವಯ ಕುಖ್ಯಾತ ಸರಣಿ ಹಂತಕ ಚಾರ್ಲ್ಸ್ ಶೋಭರಾಜ್‌ನನ್ನು ಶುಕ್ರವಾರ ನೇಪಾಳದ ಜೈಲಿನಿಂದ ಬಿಡುಗಡೆ ಮಾಡಲಾಗಿದೆ.

1975ರಲ್ಲಿ ನಡೆದಿದ್ದ ಅಮೆರಿಕಾ ಪ್ರವಾಸಿಗರ ಹತ್ಯೆ ಪ್ರಕರಣದ ದೋಷಿ ಚಾರ್ಲ್ಸ್ ಶೋಭರಾಜ್ (78), 18 ವರ್ಷಗಳ ಕಾಲ ಜೈಲಿನಲ್ಲಿದ್ದ. ಆತನ ವೃದ್ಧಾಪ್ಯ ಹಾಗೂ ಕ್ಷೀಣಿಸುತ್ತಿರುವ ಆರೋಗ್ಯವನ್ನು ಪರಿಗಣಿಸಿ ಜೈಲಿನಿಂದ ಬಿಡುಗಡೆ ಮಾಡಲಾಗಿದೆ.

ಫ್ರೆಂಚ್ ಪ್ರಜೆಯಾಗಿರುವ ಶೋಭರಾಜ್, ಏಷ್ಯಾದ್ಯಂತ 20 ಮಂದಿ ಪಾಶ್ಚಾತ್ಯ ಪ್ರವಾಸಿಗರನ್ನು ಕೊಂದಿರುವ ಆರೋಪ ಹೊಂದಿದ್ದಾನೆ. ಸಾಮಾನ್ಯವಾಗಿ ಅವರನ್ನು ದೋಚುವ ಮುನ್ನ ಅವರ ಅಹಾರ ಅಥವಾ ಪಾನೀಯದಲ್ಲಿ ಮಾದಕ ದ್ರವ್ಯ ಬೆರೆಸಿ ಕೊಲ್ಲುತ್ತಿದ್ದ ಎಂದು ಹೇಳಲಾಗಿದೆ.

ಶೋಭರಾಜ್ ಇನ್ನೂ ಹಲವಾರು ಹತ್ಯಾ ಪ್ರಕರಣಗಳಲ್ಲಿ ಭಾಗಿಯಾಗಿದ್ದು, 1970ರಲ್ಲಿ ಥಾಯ್ಲೆಂಡ್‌ನಲ್ಲಿ ಆರು ಮಂದಿ ಮಹಿಳೆಯರಿಗೆ ಮಾದಕ ದ್ರವ್ಯ ಉಣಿಸಿ ಹತ್ಯೆ ಮಾಡಿದ್ದ ಎಂದು ಥಾಯ್ಲೆಂಡ್ ಪೊಲೀಸರು ಆರೋಪಿಸಿದ್ದರು. ನಂತರ 1976ರಲ್ಲಿ ಹೊಸ ದಿಲ್ಲಿಯಲ್ಲಿ ಫ್ರಾನ್ಸ್ ಪ್ರವಾಸಿಗರಿಗೆ ವಿಷವುಣಿಸಿ ಕೊಂದ ಆರೋಪದಲ್ಲಿ ಬಂಧಿಸಿ, ಆತನನ್ನು ತಿಹಾರ್ ಜೈಲಿನಲ್ಲಿಡಲಾಗಿತ್ತು.

1986ರಲ್ಲಿ ನಿದ್ರೆ ಮಾತ್ರೆ ಬೆರೆಸಿದ ಬಿಸ್ಕತ್ ಹಾಗೂ ಕೇಕ್ ಅನ್ನು ತಿಹಾರ್ ಜೈಲು ಸಿಬ್ಬಂದಿಗೆ ತಿನ್ನಿಸಿ ಅಲ್ಲಿಂದ ತಪ್ಪಿಸಿಕೊಂಡಿದ್ದ. ನಂತರ ಆತನನ್ನು ಸೆರೆ ಹಿಡಿಯುವಲ್ಲಿ ಗೋವಾ ಪೊಲೀಸರು ಯಶಸ್ವಿಯಾಗಿದ್ದರು. ಆತನನ್ನು 1997ರವರೆಗೆ ಜೈಲಿನಲ್ಲಿಡಲಾಗಿತ್ತು. ನಂತರ ಆತ ಫ್ರಾನ್ಸ್‌ಗೆ ಮರಳಿದ್ದ.

ಮತ್ತೆ 2003ರಲ್ಲಿ ಅಮೆರಿಕಾ ಪ್ರವಾಸಿಗಳ ಹತ್ಯೆ ಪ್ರಕರಣದಲ್ಲಿ ನೇಪಾಳ ಪೊಲೀಸರಿಂದ ಬಂಧಿತನಾಗಿದ್ದ ಶೋಭರಾಜ್, ವಿಚಾರಣೆಯ ಸಂದರ್ಭದಲ್ಲಿ ತನ್ನ ಮೇಲಿನ ಆರೋಪ ಸಾಬೀತಾಗಿದ್ದರಿಂದ ಮತ್ತೆ ಜೈಲು ಸೇರಿದ್ದ.

Similar News