×
Ad

ಭಟ್ಕಳ: ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿ ನೀರಿನಲ್ಲಿ ಮುಳುಗಿ ಮೃತ್ಯು

Update: 2022-12-23 22:41 IST

ಭಟ್ಕಳ: ಚಿತ್ರದುರ್ಗದಿಂದ ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿಯೋರ್ವ ಸಮುದ್ರದ ಅಲೆಗೆ ಸಿಲುಕಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ವರದಿಯಾಗಿದೆ. 

ಮೃತ ವಿದ್ಯಾರ್ಥಿಯನ್ನು ಚಿತ್ರದುರ್ಗದ ವಿದ್ಯಾರ್ಥಿ ಮುಹಮ್ಮದ್ ಫಾಝಿಲ್ (16)  ಎಂದು  ಗುರುತಿಸಲಾಗಿದ್ದು, ಮೃತದೇಹ ಪತ್ತೆಯಾಗಿದೆ. ಈತ ಚಿತ್ರದುರ್ಗದ ಚುನ್ಮುಲಾದ್ರಿ ನ್ಯಾಶನಲ್ ಪ್ರೌಢ ಶಾಲೆಯ 10ನೇ ತರಗತಿಯ ವಿದ್ಯಾರ್ಥಿ ಎಂದು ತಿಳಿದು ಬಂದಿದೆ.

ಚಿತ್ರದುರ್ಗದಿಂದ ಒಟ್ಟು 120 ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸೇರಿ ಪ್ರವಾಸಕ್ಕೆಂದು ಬಂದಿದ್ದು, ಶಿರಸಿ, ಜೋಗ, ಗೋಕರ್ಣ ತಾಣಗಳಿಗೆ ಭೇಟಿ ನೀಡಿ ಶುಕ್ರವಾರ ಬೆಳಗ್ಗೆ ಮುರ್ಡೇಶ್ವರ ತಲುಪಿದ್ದರು ಎನ್ನಲಾಗಿದೆ. ತಂಡದಲ್ಲಿ ಕೆಲವು ವಿದ್ಯಾರ್ಥಿಗಳು ಸಮುದ್ರಕ್ಕೆ ಇಳಿದು ನೀರಿನಲ್ಲಿ ಆಟವಾಡುತ್ತಾ ಇರುವಾಗ ಅಲೆಯೊಂದು ಅಪ್ಪಳಿಸಿದ ರಭಸಕ್ಕೆ ಫಾಝಿಲ್ ಕಾಲು ಜಾರಿ ಬಿದ್ದು ಕೊಚ್ಚಿಕೊಂಡು ಹೋಗಿದ್ದಾನೆನ್ನಲಾಗಿದೆ.  ತಕ್ಷಣ ಅಲ್ಲಿದ್ದ ಮೀನುಗಾರರು, ಸ್ಥಳೀಯರು ಹುಡುಕಾಡಿದರೂ ಆತನ ಸುಳಿವು ದೊರೆತಿಲ್ಲ.

ನಂತರ ವಿದ್ಯಾರ್ಥಿಯ ಮೃತದೇಹ ನೀರಿನಲ್ಲಿ ಪತ್ತೆಯಾಗಿದೆ.  ಸುದ್ದಿ ತಿಳಿದ ತಕ್ಷಣ ಚಿತ್ರದುರ್ಗದಿಂದ ಆತನ ಪಾಲಕರು ಮುರ್ಡೇಶ್ವರಕ್ಕೆ ತಲುಪಿದ್ದು ಅವರು ನೀಡಿದ ದೂರಿನಂತೆ  ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುರ್ಡೇಶ್ವರ ಪೊಲೀಸಲು ಸಿ.ಪಿ.ಐ. ಮಹಾಬಲೇಶ್ವರ ನಾಯ್ಕ ಅವರ ಮಾರ್ಗದರ್ಶನದಲ್ಲಿ ತನಿಖೆ ನಡೆಸಿದ್ದಾರೆ.

Similar News