ಕುಟುಂಬಕ್ಕಾಗಿ ಕ್ರಿಕೆಟ್‌ ಕನಸು ತೊರೆದ ಅಣ್ಣ: ಐಪಿಎಲ್‌ ನಲ್ಲಿ ರೂ. 2.6 ಕೋಟಿಗೆ ಹರಾಜಾದ ತಮ್ಮ

Update: 2022-12-24 13:04 GMT

ಹೊಸದಿಲ್ಲಿ: ಆತ ತನ್ನ ತಮ್ಮನಿಗಾಗಿ ಕ್ರಿಕೆಟ್ ತ್ಯಜಿಸಿದ್ದ. ಆತ ಭರವಸೆದಾಯಕ ಬ್ಯಾಟರ್ ಆಗಿದ್ದರೂ ತನ್ನ ಕೌಟುಂಬಿಕ ವ್ಯವಹಾರವನ್ನು ನಿಭಾಯಿಸಲು ತನ್ನ ವೃತ್ತಿ ಜೀವನ ತ್ಯಾಗ ಮಾಡಿದ್ದ. ತಂದೆ ಹಿಮಾಂಶು ಶರ್ಮ ಕಿಡ್ನಿ ವೈಫಲ್ಯದಿಂದ ಸಾವನ್ನಪ್ಪಿದ್ದರಿಂದ ಕುಟುಂಬದ ಹೊಣೆಯನ್ನು ಹೆಗಲಿಗೇರಿಸಿಕೊಂಡಿದ್ದ. ಅಂದು ಆತ ಆ ನಿರ್ಧಾರ ತೆಗೆದುಕೊಂಡಿದ್ದರಿಂದ ಇಂದು ಆತನ ತಮ್ಮನಿಗೆ ಅದೃಷ್ಟದ ಬಾಗಿಲು ತೆರೆಯುವಂತಾಗಿದೆ. ಆ ವ್ಯಕ್ತಿ ಬೇರೆ ಯಾರೂ ಅಲ್ಲ; ಶುಕ್ರವಾರ ನಡೆದ IPL ಮಿನಿ ಹರಾಜಿನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಖರೀದಿಸಿರುವ ಜಮ್ಮು ಮತ್ತು ಕಾಶ್ಮೀರ ರಾಜ್ಯದ ಲೆಗ್ ಸ್ಪಿನ್ನರ್ ಆಲ್‌ರೌಂಡರ್ ವಿವ್ರಾಂತ್ ಶರ್ಮನ ಹಿರಿಯಣ್ಣ ವಿಕ್ರಾಂತ್ ಶರ್ಮ!! ಆತನ ತ್ಯಾಗ ಶುಕ್ರವಾರ ಫಲ ನೀಡಿದ್ದು, ವಿವ್ರಾಂತ್ ಶರ್ಮಗೆ ರೂ. 2.6 ಕೋಟಿ ಮೊತ್ತದ ಸಂಭಾವನೆ ನೀಡಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಖರೀದಿಸಿದೆ ಎಂದು indianexpress.com ವರದಿ ಮಾಡಿದೆ.

ವಿವ್ರಾಂತ್ ಶರ್ಮ ನಮೂದಿಸಿದ್ದ ಮೂಲ ಬೆಲೆಗಿಂತ 13 ಪಟ್ಟು ಹೆಚ್ಚು ಬೆಲೆ ತೆತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡ ಖರೀದಿಸಿದ್ದರಿಂದ ಆತನ ಕುಟುಂಬಕ್ಕೆ ಕೊನೆಗೂ ಪ್ರತಿಫಲ ದೊರೆತಿದೆ. "ನನ್ನ ತಂದೆ ಇಂದು ಬದುಕಿದ್ದಿದ್ದರೆ ತುಂಬಾ ಸಂತೋಷ ಪಡುತ್ತಿದ್ದರು. ಹೀಗಿದ್ದೂ ನನ್ನ ಪಯಣ ಈಗಷ್ಟೇ ಶುರುವಾಗಿದೆ. ತಂದೆಯ ಅಗಲಿಕೆಯಿಂದ ನಮ್ಮ ಕುಟುಂಬಕ್ಕೆ ಸಾಕಷ್ಟು ನಷ್ಟವಾಯಿತು. ನನ್ನ ಅಣ್ಣ ಆಮ್ಲ ಮತ್ತು ರಾಸಾಯನಿಕ ವ್ಯವಹಾರಗಳ ಹೊಣೆ ಹೊತ್ತುಕೊಂಡ ಮತ್ತು ನನಗೆ ಕ್ರಿಕೆಟ್ ಕಡೆ ಗಮನ ಹರಿಸುವಂತೆ ಸೂಚಿಸಿದ. ಆತ ಅಂತರ ವಿಶ್ವವಿದ್ಯಾಲಯ ಮಟ್ಟದ ಕ್ರಿಕೆಟ್‌ನಲ್ಲಿ ಆಡಿದ್ದ. ಆತ ನನ್ನ ಆದರ್ಶವಾಗಿದ್ದು, ಆತನ ಬ್ಯಾಟಿಂಗ್ ಶೈಲಿಯನ್ನೇ ಅಳವಡಿಸಿಕೊಂಡೆ. ನಾನು ಬಲಗೈ ಬ್ಯಾಟರ್ ಆಗಿದ್ದು, ಕೇವಲ ನನ್ನ ಅಣ್ಣನನ್ನು ಅನುಸರಿಸಲು ಆ ಬದಲಾವಣೆ ತಂದುಕೊಂಡಿದ್ದೆ. ಅದೀಗ ಫಲ ನೀಡಿದೆ" ಎಂದು ಅಹಮದಾಬಾದ್‌ನಲ್ಲಿ ಗುಜರಾತ್-ಜಮ್ಮು ಮತ್ತು ಕಾಶ್ಮೀರ ನಡುವೆ ನಡೆಯುತ್ತಿರುವ ರಣಜಿ ಪಂದ್ಯದ ವೇಳೆ ವಿವ್ರಾಂತ್ ಶರ್ಮ ಸಂತಸದ ಗಳಿಗೆಯಲ್ಲೂ ಬೇಸರ ವ್ಯಕ್ತಪಡಿಸಿದ್ದಾರೆ ಎಂದು Indian Express ವರದಿ ಮಾಡಿದೆ.

ಕಳೆದ ವರ್ಷ ಅವರನ್ನು ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ನೆಟ್ ಬೌಲರ್ ಆಗಿ ಆಯ್ಕೆ ಮಾಡಲಾಗಿತ್ತು. ಆತನ ಬೌಲಿಂಗ್ ಶೈಲಿಯ ವಿಡಿಯೊಗಳನ್ನು ತಂಡದ ಆಡಳಿತ ಮಂಡಳಿಯೊಂದಿಗೆ ಹಂಚಿಕೊಂಡಿದ್ದ ಹಿರಿಯ ಆಟಗಾರ ಅಬ್ದುಲ್ ಸಮದ್, ವಿವ್ರಾಂತ್ ಜಮ್ಮು ಮತ್ತು ಕಾಶ್ಮೀರ ತಂಡ ಸೇರಲು ನೆರವಾಗಿದ್ದರು.

ಈ ಕುರಿತು ಪ್ರತಿಕ್ರಿಯಿಸಿರುವ ವಿವ್ರಾಂತ್, ನಾನು ಸಾಕಷ್ಟು ಮಂದಿ ಹಿತೈಷಿಗಳಿಗೆ ಕೃತಜ್ಞತೆ ಅರ್ಪಿಸಬೇಕಿದೆ. ಆದರೆ, ಖಂಡಿತವಾಗಿ ಐಪಿಲ್ ಪಂದ್ಯಾವಳಿಯಲ್ಲಿ ಆಡಿದ ನನ್ನ ಗೆಳೆಯರು ಹಾಗೂ ಸಹ ಆಟಗಾರರಿಂದ ನನ್ನ ಆತ್ಮವಿಶ್ವಾಸ ವೃದ್ಧಿಸಿತು. ಈ ಪಯಣ ಮೊದಲು ರಾಸಿಖ್ ಸಲಾಂ, ಉಮ್ರಾನ್ ಮಲಿಕ್ (ಸದ್ಯ ಭಾರತ ತಂಡದಲ್ಲಿರುವ ವೇಗದ ಬೌಲರ್)ಗಿಂತ ಮುಂಚೆ ಆಯ್ಕೆಯಾಗಿದ್ದ ಅಬ್ದುಲ್ ಸಮದ್‌ರೊಂದಿಗೆ ಆರಂಭವಾಯಿತು" ಎಂದು ಸ್ಮರಿಸಿದ್ದಾರೆ.

Similar News