ಸಾಸ್ತಾನ ಚರ್ಚಿನ ಗೋದಲಿಯಲ್ಲಿ ಮೂಡಿ ಬಂದ ಫೆಲೆಸ್ತೀನ್!

Update: 2022-12-24 14:50 GMT

ಬ್ರಹ್ಮಾವರ: ಕ್ರೈಸ್ತ ಸಮುದಾಯದ ಹಬ್ಬ ಕ್ರಿಸ್ಮಸ್ ಗೆ ಇಡೀ ವಿಶ್ವವೇ ಸಜ್ಜಾಗಿದ್ದು, ಎಲ್ಲಾ ಕಡೆಗಳಲ್ಲಿ ಹಬ್ಬದ ಆಚರಣೆ ಆಕರ್ಷಣೆಯ ಕೇಂದ್ರಬಿಂದುವಾದ ಗೋದಲಿ ನಿರ್ಮಾಣ ಮಾಡಲಾಗಿದೆ. ಬ್ರಹ್ಮಾವರ ತಾಲೂಕಿನ ಸಾಸ್ತಾನ ಸಂತ ಅಂತೋನಿ ದೇವಾಲಯದ ಭಾರತೀಯ ಕಥೊಲಿಕ್ ಯುವ ಸಂಚಾಲನದ ಸದಸ್ಯರು ನಿರ್ಮಿಸಿರುವ ಗೋದಲಿಯಲ್ಲಿ ಯೇಸುವಿನ ಕಾಲದ ಸಂಪೂರ್ಣ ಫೆಲೆಸ್ತೀನ್ ದೇಶದ ಚಿತ್ರಣವನ್ನು ಮೂಡಿಸುವ ಮೂಲಕ ಆಕರ್ಷಕವಾಗಿ ನಿರ್ಮಾಣಗೊಂಡಿದೆ. 

ಚರ್ಚಿನ ಧರ್ಮಗುರು ವಂ. ಸುನೀಲ್ ಡಿಸಿಲ್ವಾರ ಆಕರ್ಷಕ ಪರಿಕಲ್ಪನೆಯೊಂದಿಗೆ  ಐಸಿವೈಎಮ್ ಅಧ್ಯಕ್ಷ ಬ್ರೈಸನ್ ಡಿಸೋಜ ಹಾಗೂ ಇತರ ಸದಸ್ಯರ ಸಹಕಾರದೊಂದಿಗೆ ಸುಮಾರು ಒಂದು ತಿಂಗಳ ಸತತ ತಯಾರಿಯೊಂದಿಗೆ ಆಕರ್ಷಕವಾದ ಗೋದಲಿಯನ್ನು ನಿರ್ಮಿಸಲಾಗಿದೆ. 

ಸಾಸ್ತಾನ ಚರ್ಚಿನಲ್ಲಿ ನಿರ್ಮಾಣಗೊಂಡಿರುವ ಫೆಲೆಸ್ತೀನ್ ದೇಶವನ್ನು ಸಂಪೂರ್ಣವಾಗಿ ಚಿತ್ರಿಸಲಾಗಿದ್ದು ಅಲ್ಲಿನ ಪ್ರಮುಖ ನಗರಗಳಾದ ಸಾಮಾರಿಯಾ, ಜೆರುಸಲೆಂ ಪಟ್ಟಣ, ಗಾಲಿಲೆಯಾ, ನಜರೆತ್, ಸೇರಿದಂತೆ ಹಲವಾರು ನಗರಗಳನ್ನು ಚಿತ್ರಿಸಲಾಗಿದೆ. ಅದರೊಂದಿಗೆ ಮೆಡಿರೇನಿಯನ್ ಸಮುದ್ರ, ನಿರ್ಜೀವ ಸಮುದ್ರ, ಜೊರ್ಡಾನ್ ನದಿ, ಮರುಭೂಮಿ ಹಾಗೂ ಯೇಸು ಕ್ರಿಸ್ತರ ಜನ್ಮ ಸ್ಥಳ ಬೆತ್ಲೆಹೆಮ್ ನಗರವನ್ನು ಕೂಡ ನಿರ್ಮಿಸಲಾಗಿದೆ. 

ಯೇಸು ಜನನದ ದೃಶ್ಯ ಸಾದರ ಪಡಿಸುವ ಗೋದಾಮಿಗೆ ಸುದೀರ್ಘ ಇತಿಹಾಸವಿದೆ. ಕ್ರಿ.ಶ. 1223ರಲ್ಲಿ ಮೊತ್ತ ಮೊದಲ ಬಾರಿಗೆ ಗೋದಲಿ ಪ್ರತಿರೂಪ ಇಟಲಿಯಲ್ಲಿ ರಚನೆಯಾಗಿತ್ತು ಎಂದು ಇತಿಹಾಸದಿಂದ ತಿಳಿದುಬರುತ್ತದೆ. ಸಂತ ಫ್ರಾನ್ಸಿಸ್‌ ಅಸ್ಸಿಸಿಯವರು ಯೇಸು ಜನನದ ಈ ದೃಶ್ಯವನ್ನು ರೂಪಿಸಿದವರು. ಅಂದು ಗೋದಲಿಯಲ್ಲಿ ವಿಗ್ರಹಗಳಿಲ್ಲದೇ ಮಾನವರನ್ನೇ ಪಾತ್ರಧಾರಿಗಳಾಗಿ ರೂಪಿಸಲಾಗಿತ್ತು. ಪ್ರಥಮ ಗೋದಲಿಯು ವಿಶೇಷವಾಗಿ ಆಕರ್ಷಿಸಿ ಕ್ರಮೇಣ ಇದು ಕ್ರಿಸ್‌ಮಸ್‌ ಆಚರಣೆಯ ಒಂದು ಅವಿಭಾಜ್ಯ ಅಂಗವಾಗಿ ರೂಪುಗೊಂಡಿತು.

ಗೋದಲಿಯಲ್ಲಿ ಯೇಸುವಿನ ತಂದೆ ಜೋಸೆಫ್‌, ತಾಯಿ ಮರಿಯ, ಬಾಲ ಯೇಸು, ಕುರಿಗಾಹಿಗಳು, ಆಡು-ಕುರಿಗಳು, ದನ-ಕತ್ತೆ, ಒಂಟೆ, ಪೂರ್ವದಿಂದ ಯೇಸುವಿನ ಭೇಟಿಗಾಗಿ ಆಗಮಿಸಿದ ಜ್ಯೋತಿಷಿಗಳು ಹಾಗೂ ದೇವದೂತರ ವಿಗ್ರಹಗಳಿರುತ್ತವೆ. ಗುಡ್ಡ-ಬೆಟ್ಟಗಳು ಹಾಗೂ ಹುಲ್ಲಿನ ಹಾಸು ಸಹಿತ ನೈಸರ್ಗಿಕವಾಗಿ ಎಲ್ಲರನ್ನೂ ಆಕರ್ಷಿಸುವ ಸುಂದರ ರಚನೆ ಇದಾಗಿದೆ.

ಪ್ರತಿವರ್ಷವೂ ಕೂಡ ಗೋದಲಿ ನಿರ್ಮಾಣ ಸಾಮಾನ್ಯವಾಗಿದೆ ಆದರೆ ಜನರಿಗೆ ಯೇಸು ಸ್ವಾಮಿಯವರು ಹುಟ್ಟಿದ ಪ್ಯಾಲೆಸ್ತಿನ್ ದೇಶ ಯಾವ ರೀತಿ ಇದೆ ಎನ್ನುವುದನ್ನು ತೋರಿಸುವ ನಿಟ್ಟಿನಲ್ಲಿ ಈ ಬಾರಿಯ ಗೋದಲಿಯನ್ನು ವಿಶಿಷ್ಠವಾಗಿ ಬೈಬಲ್ ನ ಕಥೆಗಳನ್ನು ಆಧರಿಸಿ ನಿರ್ಮಿಸಲಾಗಿದೆ. ಇಡೀ ಪ್ಯಾಲೆಸ್ತಿನ್ ದೇಶದಲ್ಲಿ ಇರುವ ನಗರಗಳ ಪರಿಚಯವನ್ನು ನೀಡಲು ಪ್ರಯತ್ನಿಸಲಾಗಿದ್ದು ಅತ್ಯುತ್ತಮವಾಗಿ ಗೋದಲಿ ಮೂಡಿ ಬಂದಿದೆ
- ವಂ.ಸುನೀಲ್ ಡಿ’ಸಿಲ್ವಾ, ಧರ್ಮಗುರುಗಳು ಸಾಸ್ತಾನ ಸಂತ ಅಂತೋನಿ ದೇವಾಲಯ

Similar News