ಧಡೂತಿ ದೇಹದ ಮಹಿಳೆಯ ಪ್ರಯಾಣಕ್ಕೆ ನಿರಾಕರಿಸಿದ ವಿಮಾನಯಾನ ಸಂಸ್ಥೆ!

Update: 2022-12-25 12:09 GMT

ದೋಹಾ: ದಡೂತಿ ದೇಹಿಯೊಬ್ಬರಿಗೆ ವಿಮಾನ ಪ್ರಯಾಣ ನಿರಾಕರಿಸಿದ್ದರಿಂದ  ಆಕೆಗೆ ಮಾನಸಿಕ ಸಮಾಲೋಚನಾ ಅವಧಿಯ ಶುಲ್ಕ ನೀಡಬೇಕು ಎಂದು ಖತರ್ ಏರ್‌ವೇಸ್‌ಗೆ ನ್ಯಾಯಾಲಯವೊಂದು ಆದೇಶಿಸಿದೆ. 

ನವೆಂಬರ್ 22ರಂದು ತಾನು ತೀರಾ ದಪ್ಪಗಿರುವುದರಿಂದ ವಿಮಾನ ಪ್ರಯಾಣದ ವೇಳೆ ಖತರ್ ಏರ್‌ವೇಸ್ ನನ್ನ ವಿರುದ್ಧ ತಾರತಮ್ಯವೆಸಗಿದೆ ಎಂದು ಬ್ರೆಝಿಲ್ ರೂಪದರ್ಶಿ ಜೂಲಿಯಾನಾ ನೆಹ್ಮೆ ದೂರಿದ್ದಾರೆ ಎಂದು Independent ವರದಿ ಮಾಡಿದೆ.

ಇದಕ್ಕೂ ಮುನ್ನ, "ನಾನು ಮಿತವ್ಯಯಿ ದರ್ಜೆಯ ಆಸನದಲ್ಲಿ ಪ್ರಯಾಣಿಸಲು ತಡೆ ಒಡ್ಡಲಾಯಿತು. ಬದಲಿಗೆ ನಾನು ವ್ಯಾವಹಾರಿಕ ದರ್ಜೆಯ ಟಿಕೆಟ್ ಖರೀದಿಸಿದರೆ ಮಾತ್ರ ಪ್ರಯಾಣಕ್ಕೆ ಅವಕಾಶ ನೀಡುವುದಾಗಿ ಖತರ್ ಏರ್‌ವೇಸ್ ಸಿಬ್ಬಂದಿ ತಿಳಿಸಿದರು. ಅದಕ್ಕಾಗಿ ನಾನು ಅದಾಗಲೇ ಮಿತವ್ಯಯಿ ದರ್ಜೆಯ ಆಸನಕ್ಕೆ ಪಾವತಿಸಿದ್ದ 1000 ಡಾಲರ್ ಹೊರತುಪಡಿಸಿ ಹೆಚ್ಚುವರಿಯಾಗಿ 3000 ಡಾಲರ್ ಪಾವತಿಸುವಂತೆ ಸೂಚಿಸಿದರು" ಎಂದು ನೆಹ್ಮೆ ಆರೋಪಿಸಿದ್ದರು.

ಘಟನೆಯನ್ನು ಚಿತ್ರೀಕರಿಸಿಕೊಂಡಿದ್ದ ನೆಹ್ಮೆ ಅದನ್ನು ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ಕೂಡಲೇ ಆ ವಿಡಿಯೊ ವೈರಲ್ ಆಗಿತ್ತು. ಲೆಬನಾನ್‌ನ ಬೈರೂತ್‌ನಿಂದ ದೋಹಾಗೆ ವಿಮಾನದಲ್ಲಿ ಪ್ರಯಾಣಿಸಲು ಕತರ್ ಏರ್‌ವೇಸ್ ನನಗೆ ಅವಕಾಶ ನೀಡಲಿಲ್ಲ ಮತ್ತು ನನ್ನ ಟಿಕೆಟ್ ಮೊತ್ತವನ್ನು ಮರುಪಾವತಿಸಲೂ ನಿರಾಕರಿಸಿತು. ಇದರಿಂದ ನಾನು ಬ್ರೆಝಿಲ್‌ನ ಸಾವೊ ಪೌಲೊಗೆ ತೆರಳುತ್ತಿದ್ದ ಸಂಪರ್ಕ ವಿಮಾನವನ್ನು ತಪ್ಪಿಸಿಕೊಳ್ಳುವಂತಾಯಿತು ಎಂದು ಆಕೆ ದೂರಿದ್ದಳು.

ಪ್ರಕರಣದ ವಿಚಾರಣೆ ನಡೆಸಿದ್ದ ಸಾವೊ ಪೌಲೊ ನ್ಯಾಯಾಲಯವೊಂದು ಆಕೆಯ ಮಾನಸಿಕ ಸಮಾಲೋಚನೆಗಾಗಿ ಹಣ ಪಾವತಿಸುವಂತೆ ಖತರ್ ಏರ್‌ವೇಸ್‌ಗೆ ಸೂಚಿಸಿದೆ ಎಂದು Daily Mail ವರದಿ ಮಾಡಿದೆ.

Similar News