ʼಅಳು ನಿಲ್ಲಿಸಿʼ: ಫಿಫಾ ಫೈನಲ್‌ ಬಗೆಗಿನ ಫ್ರಾನ್ಸ್‌ ಅಭಿಮಾನಿಗಳ ಅಸಮಾಧಾನಕ್ಕೆ ಅರ್ಜೆಂಟೀನಾ ಅಭಿಮಾನಿಗಳಿಂದ ತಿರುಗೇಟು

Update: 2022-12-25 13:38 GMT

ಬ್ರ್ಯೂನಸ್ ಐರಿಸ್: ಫ್ರಾನ್ಸ್ ಫುಟ್‌ಬಾಲ್ ಅಭಿಮಾನಿಗಳ ಶೋಕವನ್ನು ಗೇಲಿ ಮಾಡಲು ಅರ್ಜೆಂಟೀನಾ ಫುಟ್‌ಬಾಲ್ ಅಭಿಮಾನಿಗಳು ತಮ್ಮದೇ ವಿಶಿಷ್ಟ ಶೈಲಿಯ ಮನವಿ ಪತ್ರ ಅಭಿಯಾನಯನ್ನು ಆರಂಭಿಸಿದ್ದು, "ಫ್ರಾನ್ಸ್ ಅಳುವುದನ್ನು ನಿಲ್ಲಿಸು" ಎಂಬ ಆ ಮನವಿ ಪತ್ರಕ್ಕೆ ಈವರೆಗೆ 6,50,000ಕ್ಕೂ ಹೆಚ್ಚು ಅರ್ಜೆಂಟೀನಾ ಫುಟ್‌ಬಾಲ್ ಅಭಿಮಾನಿಗಳು ಸಹಿ ಮಾಡಿದ್ದಾರೆ ಎಂದು ವರದಿಯಾಗಿದೆ.


Mesopinions ಜಾಲತಾಣ ಬಳಕೆದಾರರೊಬ್ಬರು, ಫ್ರಾನ್ಸ್ ಮತ್ತು ಅರ್ಜೆಂಟೀನಾ ತಂಡದ ನಡುವೆ ಫಿಫಾ ಮರು ಪಂದ್ಯ ಆಯೋಜಿಸಬೇಕು ಎಂದು ಆಗ್ರಹಿಸಿದ್ದರು. ಅರ್ಜೆಂಟೀನಾ ತಂಡಕ್ಕೆ ನ್ಯಾಯೋಚಿತವಲ್ಲದ ಪೆನಾಲ್ಟಿ ಕಾರ್ನರ್ ಅವಕಾಶ ನೀಡಿದ್ದು ಹಾಗೂ ಫ್ರೆಂಚ್ ತಾರೆ ಕಿಲಿಯನ್ ಎಂಬಾಪೆ, ಅರ್ಜೆಂಟೀನಾದ ಡಿ ಮಾರಿಯಾ ಅವರ ಗೋಲು ಪ್ರಯತ್ನವನ್ನು ತಡೆಯಲು ಯತ್ನಿಸಿದಾಗ ಅದನ್ನು ಫೌಲ್ ಎಂಬ ತೀರ್ಮಾನ ನೀಡಿದ್ದು ತಪ್ಪು ನಿರ್ಣಯಗಳು ಎಂದು ಅವರು ಆರೋಪಿಸಿದ್ದರು. ಇದರ ಬೆನ್ನಿಗೇ ಅರ್ಜೆಂಟೀನಾ ಫುಟ್‌ಬಾಲ್ ಅಭಿಮಾನಿಗಳು "ಫ್ರಾನ್ಸ್ ಅಳುವುದನ್ನು ನಿಲ್ಲಿಸು" ಎಂಬ ಮನವಿ ಪತ್ರ ಅಭಿಯಾನವನ್ನು ಶುರು ಮಾಡಿದ್ದಾರೆ.


ಇದಕ್ಕೂ ಮುನ್ನ, ಪೆನಾಲ್ಟಿ ಶೂಟೌಟ್‌ನಲ್ಲಿ 4-2 ಅಂತರದಲ್ಲಿ ಅರ್ಜೆಂಟೀನಾ ತಂಡ ಜಯಿಸಿದ್ದ ಫೈನಲ್ ಪಂದ್ಯವನ್ನು ಮರು ಆಯೋಜಿಸಬೇಕು ಎಂದು ನಿರಾಸೆಗೊಂಡಿರುವ ಫ್ರಾನ್ಸ್ ತಂಡದ ಎರಡು ಲಕ್ಷಕ್ಕೂ ಹೆಚ್ಚು ಅಭಿಮಾನಿಗಳು ಮನವಿ ಪತ್ರಕ್ಕೆ ಸಹಿ ಮಾಡಿದ್ದರು.

ಇದನ್ನೂ ಓದಿ: ಫಿಫಾ ಫೈನಲ್ ಮರು ಪಂದ್ಯಾಟಕ್ಕೆ ಆಗ್ರಹಿಸಿ ಎರಡು ಲಕ್ಷಕ್ಕೂ ಅಧಿಕ ಸಹಿ ಸಂಗ್ರಹಿಸಿದ ʼಅತೃಪ್ತ ಅಭಿಮಾನಿಗಳುʼ

Goal ಸುದ್ದಿ ಸಂಸ್ಥೆಯ ವರದಿ ಪ್ರಕಾರ, "ಫ್ರಾನ್ಸ್ ಅಳುವುದನ್ನು ನಿಲ್ಲಿಸು" ಎಂಬ ಮನವಿ ಪತ್ರ ಅಭಿಯಾನ ವ್ಯಾಲೆಂಟೀನ್ ಗೋಮೆಜ್  ಎಂಬ ಅರ್ಜೆಂಟೀನಾ ತಂಡದ ಅಭಿಮಾನಿಯಿಂದ ಶುರುವಾಗಿದೆ ಎಂದು ಹೇಳಲಾಗಿದೆ. change.org ಜಾಲತಾಣದಲ್ಲಿನ ಈ ಅಭಿಯಾನಕ್ಕೆ ಕೆಲವೇ ಗಂಟೆಗಳಲ್ಲಿ 6,50,000 ಮಂದಿ ಸಹಿ ಮಾಡಿದ್ದಾರೆ.


ಈ ಕುರಿತು ಪ್ರತಿಕ್ರಿಯಿಸಿರುವ ಗೋಮೆಜ್, "ನಾವು ವಿಶ್ವಕಪ್ ಗೆದ್ದಾಗಿನಿಂದ ಫ್ರಾನ್ಸ್ ತಂಡದ ಅಭಿಮಾನಿಗಳು ಅಳುವುದನ್ನು, ದೂರುವುದನ್ನು ನಿಲ್ಲಿಸಿಲ್ಲ ಮತ್ತು ಅರ್ಜೆಂಟೀನಾ ತಂಡ ವಿಶ್ವ ಚಾಂಪಿಯನ್ ಆಗಿರುವುದನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ" ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Similar News