ಭಾರತ-ನೇಪಾಳ ಗಡಿಯಲ್ಲಿ ಭಾರತೀಯ ಕಾರ್ಮಿಕರ ಮೇಲೆ ಕಲ್ಲು ತೂರಾಟ

Update: 2022-12-25 15:30 GMT

ಡೆಹ್ರಾಡೂನ್, ಡಿ. 25: ಉತ್ತರಾಖಂಡದ ಧಾರ್‌ಚುಲಾದ ಭಾರತ-ನೇಪಾಳ ಗಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಭಾರತೀಯ ಕಾರ್ಮಿಕರ ಮೇಲೆ ಶುಕ್ರವಾರ ನೇಪಾಳಿ ನಾಗರಿಕರು ಕಲ್ಲು ತೂರಾಟ ನಡೆಸಿದ್ದಾರೆ ಎಂದು ವರದಿಯಾಗಿದೆ. 

ಉಭಯ ರಾಷ್ಟ್ರಗಳ ನಡುವೆ ಹರಿಯುತ್ತಿರುವ ಕಾಳಿ ನದಿಗೆ ತಡೆಗೋಡೆ ನಿರ್ಮಾಣ ಮಾಡುತ್ತಿದ್ದ ಕಾರ್ಮಿಕರ ಮೇಲೆ ನೇಪಾಳಿ ನಾಗರಿಕರು ಕಲ್ಲು ತೂರಾಟ ನಡೆಸಿದ್ದಾರೆ. ಕಲ್ಲು ತೂರಾಟದಿಂದ ಎರಡು ಡಂಪರ್ ಟ್ರಕ್‌ನ ಕಿಟಕಿ ಗಾಜಗಳಿಗೆ, ಎರಡು ಟಿಪ್ಪರ್ ಟ್ರಕ್‌ಗಳಿಗೆ ಹಾಗೂ ಕೆಲವು ಬುಲ್ಡೋಜರ್‌ಗಳಿಗೆ ಹಾನಿ ಉಂಟಾಗಿವೆ.

ದಾರ್‌ಚುಲ್‌ನ ಘಾಟ್ಖೋಲಾ ಪ್ರದೇಶ 2013ರಲ್ಲಿ ಬೃಹತ್ ನೆರೆಗೆ ಸಾಕ್ಷಿಯಾಗಿತ್ತು. ಅನಂತರ ಕಾಳಿ ನದಿ ದಂಡೆಯಲ್ಲಿ ರಕ್ಷಣಾ ತಡೆ ಗೋಡೆಯನ್ನು ನಿರ್ಮಾಣ ಮಾಡಲು ಭಾರತ ಆರಂಭಿಸಿತ್ತು.

‘‘ಘಟನೆಯ ಕುರಿತು ಮುನ್ನೆಚ್ಚರಿಕೆಯ ಕ್ರಮವಾಗಿ ಉಭಯ ಕಡೆಗಳಲ್ಲಿ ಜಂಟಿ ಸಮೀಕ್ಷೆ ನಡೆಸಲಾಗಿದೆ. ಸದ್ಯೋಭವಿಷ್ಯದಲ್ಲಿ ಉನ್ನತ ಮಟ್ಟದ ಅಧಿಕಾರಿಗಳ ಸಭೆಯನ್ನು ಕರೆಯಲಾಗುವುದು’’ ಎಂದು ಪಿತೋರ್‌ಗಢ ಜಿಲ್ಲೆಯ ದಂಡಾಧಿಕಾರಿ ರೀನಾ ಜೋಷಿ ತಿಳಿಸಿದ್ದಾರೆ. 

ಭಾರತೀಯ ನಿರ್ಮಾಣ ಕಾರ್ಮಿಕರ ಮೇಲೆ ಕಲ್ಲು ತೂರಾಟ ನಡೆಸಿದವರು ಕಮ್ಯೂನಿಷ್ಟ್ ಪಾರ್ಟಿ ಆಫ್ ನೇಪಾಳ (ಮಾವೋವಾದಿ)ದ ವಿಪ್ಲವ್ ಬಣದ ಸದಸ್ಯರು. 

ಭಾರತೀಯ ಕಾರ್ಮಿಕರ ಮೇಲೆ ಡಿಸೆಂಬರ್ 4ರಂದು ಕಲ್ಲು ತೂರಾಟ ನಡೆಸಿದ ನೇಪಾಳಿ ನಾಗರಿಕರ ವಿರುದ್ಧ ಭಾರತದಲ್ಲಿ ದಾಖಲಿಸಿದ ಪ್ರಕರಣವನ್ನು ಹಿಂಪಡೆಯುವಂತೆ ಈ ರಾಜಕೀಯ ಸಂಘಟನೆಯ ಸದಸ್ಯರು ಆಗ್ರಹಿದ್ದಾರೆ.

ಇದು ನದಿಯ ಹರಿವನ್ನು ನೇಪಾಳದ ಕಡೆಗೆ ತಿರುಗಿಸುತ್ತದೆ ಹಾಗೂ ತಮ್ಮ ಭಾಗದಲ್ಲಿ ನೆರೆ ಸಂಭವಿಸಬಹುದು ಎಂಬ ಆತಂಕದಿಂದ ನೇಪಾಳದ ಅಧಿಕಾರಿಗಳು ಆರಂಭದಲ್ಲಿ ನದಿಯ ಉದ್ದಕ್ಕೂ ರಕ್ಷಣಾ ಗೋಡೆಯನ್ನು ನಿರ್ಮಿಸಲು ವಿರೋಧಿಸಿದ್ದರು. 

‘‘ನಮ್ಮ ಕೆಲಸ 10-15 ದಿನಗಳು ವಿಳಂಬವಾಯಿತು. ಇದೇ ಪರಿಸ್ಥಿತಿ ಮುಂದುವರಿದರೆ, ತೊಂದರೆ ಉಂಟಾಗುತ್ತದೆ. ಕಾರ್ಮಿಕರ ಸುರಕ್ಷೆಗೆ ವ್ಯವಸ್ಥೆ ಮಾಡಬೇಕು. ಎರಡು ಡಂಪರ್ ಟ್ರಕ್‌ಗಳಿಗೆ ಹಾನಿ ಉಂಟಾಗಿವೆ. ಇದಕ್ಕೆ ಪೊಲೀಸರು ಸಾಕ್ಷಿ’’ ಎಂದು ಯೋಜನಾ ಮ್ಯಾನೇಜರ್ ಇಂದ್ರಜಿತ್ ಶರ್ಮಾ ಅವರು ತಿಳಿಸಿದ್ದಾರೆ.

ಈ ವಲಯದಲ್ಲಿ ಒಂದು ವಾರದಲ್ಲಿ ಸಂಭವಿಸುತ್ತಿರುವ ಎರಡನೇ ಘಟನೆ ಇದಾಗಿದೆ. ಇದೇ ರೀತಿಯ ಘಟನೆ ಡಿಸೆಂಬರ್ 19ರಂದು ಸಂಭವಿಸಿತ್ತು.

Similar News