ಗಡ್ಡ, ಟರ್ಬನ್ ಹೊಂದಿರುವ ಸಿಖ್ಖರಿಗೆ ಮರೈನ್‌ನಲ್ಲಿ ಅವಕಾಶ: ಅಮೆರಿಕ ನ್ಯಾಯಾಲಯದ ಆದೇಶ

Update: 2022-12-25 18:21 GMT

ವಾಷಿಂಗ್ಟನ್, ಡಿ.25: ಗಡ್ಡ ಮತ್ತು ಟರ್ಬನ್(ಪೇಟ) ಹೊಂದಿರುವ ಸಿಖ್ಖರಿಗೆ ಅಮೆರಿಕದ ಮರೀನ್ ಕಾಪ್ಸ್(ಸಶಸ್ತ್ರಪಡೆಗೆ ಸಂಬಂಧಿಸಿದ ತುಕಡಿ)ನಲ್ಲಿ ಪ್ರವೇಶ ನಿರಾಕರಿಸುವಂತಿಲ್ಲ ಎಂದು ಅಮೆರಿಕದ ನ್ಯಾಯಾಲಯ ಆದೇಶಿಸಿದೆ.

ಅಮೆರಿಕದ ವಿಶಿಷ್ಟ ಪಡೆಯಾಗಿ ಕಾರ್ಯ ನಿರ್ವಹಿಸುವ ಮರೀನ್ ತುಕಡಿಯ ತರಬೇತಿಗೆ ಹಾಜರಾಗಬೇಕಿದ್ದರೆ ಗಡ್ಡ ಬೋಳಿಸಿ ಟರ್ಬನ್ ತೆಗೆದಿರಿಸಬೇಕು ಎಂಬ ನಿಯಮವಿತ್ತು. ಇದನ್ನು ಪ್ರಶ್ನಿಸಿ, ಮರೀನ್ ಕಾಪ್ಸ್‌ಗೆ ನೇಮಕಾತಿ ಆದೇಶ ಪಡೆದಿದ್ದ ಆಕಾಶ್ ಸಿಂಗ್, ಜಸ್‌ಕೀರತ್ ಸಿಂಗ್ ಮತ್ತು ಮಿಲಾಪ್ ಸಿಂಗ್ ಚಹಾಲ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ತಮ್ಮ ಧಾರ್ಮಿಕ ನಂಬಿಕೆಗಳನ್ನು ತ್ಯಾಗ ಮಾಡದೆ ತುಕಡಿಯಲ್ಲಿ ತರಬೇತಿಗೆ ಹಾಜರಾಗಲು ಅವಕಾಶ ನೀಡಬೇಕೆಂದು ಅರ್ಜಿದಾರರು ಕೋರಿದ್ದರು. ಗಡ್ಡವು ‘ಪಡೆಯ ಏಕರೂಪತೆ’ ಮತ್ತು ನೇಮಕಾತಿಗಳಲ್ಲಿ ಕಾಣಿಸಿಕೊಳ್ಳುವುದರ ಮೇಲೆ ಪರಿಣಾಮ ಬೀರುವ ಜತೆಗೆ, ರಾಷ್ಟ್ರೀಯ ಭದ್ರತೆಗೆ ಬೆದರಿಕೆ ಒಡ್ಡುತ್ತದೆ ಎಂದು ಸೇನಾಪಡೆಯ ಪರ ವಕೀಲರು ಪ್ರತಿಪಾದಿಸಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಸಿಖ್ ಅರ್ಜಿದಾರರ ಪರ ತೀರ್ಪು ನೀಡಿದೆ.

ಇದು ಹಲವು ವರ್ಷದ ಹೋರಾಟದ ಬಳಿಕ ಧಾರ್ಮಿಕ ಸ್ವಾತಂತ್ರ್ಯಕ್ಕಾಗಿ ದೊರೆತ ಪ್ರಮುಖ ತೀರ್ಪು ಆಗಿದೆ. ಈ ಹಿಂದಿನ ನಿಯಮ ಧಾರ್ಮಿಕ ಸ್ವಾತಂತ್ರ್ಯ ಪುನಃಸ್ಥಾಪನೆ ಕಾಯ್ದೆಯ ಉಲ್ಲಂಘನೆಯಾಗಿದೆ. ದೇವರ ಮೇಲಿನ ನಂಬಿಕೆ ಮತ್ತು ದೇಶಕ್ಕೆ ಸೇವೆ ಸಲ್ಲಿಸುವ ನಡುವೆ ಯಾರೂ ಆಯ್ಕೆ ಮಾಡಬಾರದು ಎಂದು ಅರ್ಜಿದಾರರ ವಕೀಲ ಎರಿಕ್ ಬಾಕ್ಸ್‌ಟರ್ ಹೇಳಿದ್ದಾರೆ.

Similar News