ಏಶ್ಯಕಪ್: 5 ಚಿನ್ನ ಸಹಿತ 9 ಪದಕ ಜಯಿಸಿದ ಭಾರತದ ಬಿಲ್ಲುಗಾರರು

Update: 2022-12-25 18:20 GMT

ಶಾರ್ಜಾ, ಡಿ. 25: ಏಶ್ಯಕಪ್ ಮೂರನೇ ಹಂತದಲ್ಲಿ ರವಿವಾರ ಅತ್ಯುತ್ತಮ ಪ್ರದರ್ಶನ ನೀಡಿದ ಭಾರತದ ಜೂನಿಯರ್ ಬಿಲ್ಲುಗಾರರು ಐದು ಚಿನ್ನ ಸಹಿತ ಒಟ್ಟು 9 ಪದಕಗಳನ್ನು ಬಾಚಿಕೊಂಡಿದ್ದಾರೆ.

ಕಾಂಪೌಂಡ್ ವಿಭಾಗವೊಂದರಲ್ಲಿಯೇ ಭಾರತವು ಹೆಚ್ಚು ಪದಕಗಳನ್ನು ಜಯಿಸಿದೆ. ಈ ವಿಭಾಗದಲ್ಲಿ 8 ಪದಕಗಳ ಪೈಕಿ 7ನ್ನು ಗೆದ್ದುಕೊಂಡಿದೆ. ವೈಯಕ್ತಿಕ ಮಹಿಳಾ ವಿಭಾಗದಲ್ಲಿ ಪ್ರಗತಿ, ಅದಿತಿ ಸ್ವಾಮಿ ಹಾಗೂ ಪ್ರನೀತ್ ಕೌರ್ ಅಗ್ರ ಮೂರು ಸ್ಥಾನಗಳನ್ನು ಪಡೆದು ಕ್ಲೀನ್ಸ್ವೀಪ್ ಸಾಧಿಸಿದರು.

ಕಾಂಪೌಂಡ್ ವೈಯಕ್ತಿಕ ವಿಭಾಗದಲ್ಲಿ ಪ್ರಿಯಾಂಶ್ ಹಾಗೂ ಓಜಾಸ್ ದೆವೊ ಚಿನ್ನ ಹಾಗೂ ಬೆಳ್ಳಿ ಪದಕ ಜಯಿಸಿದರು. ಭಾರತೀಯ ಕಾಂಪೌಂಡ್ ಆರ್ಚರ್ಗಳು ಪುರುಷರ ಹಾಗೂ ಮಹಿಳೆಯರ ವಿಭಾಗದ ಟೀಮ್ ಸ್ಪರ್ಧೆಗಳಲ್ಲಿ ಅಗ್ರ ಸ್ಥಾನ ಪಡೆದಿದ್ದಾರೆ. ಕೊರಿಯಾವನ್ನು ಮಣಿಸಿ ಚಿನ್ನದ ಪದಕ ಜಯಿಸಿದ್ದಾರೆ. ಕಾಂಪೌಂಡ್ ಮಿಕ್ಸೆಡ್ ಜೋಡಿ ಸ್ಪರ್ಧೆಯಲ್ಲಿ ಮಾತ್ರ ಭಾರತ ಬರಿಗೈಯಲ್ಲಿ ವಾಪಸಾಗಿದೆ. ಓಜಾಸ್ ಹಾಗೂ ಪ್ರಗತಿ ಕ್ವಾರ್ಟರ್ ಫೈನಲ್ನಲ್ಲಿ ವಿಯೆಟ್ನಾಂ ಜೋಡಿಗೆ ಶರಣಾದರು.

ರಿಕರ್ವ್ ವಿಭಾಗದಲ್ಲಿ ಭಾರತ ಒಂದು ಚಿನ್ನ ಹಾಗೂ ಒಂದು ಬೆಳ್ಳಿ ಗೆದ್ದುಕೊಂಡಿದೆ. ಕೊರಿಯಾವನ್ನು ಮಣಿಸಿದ ಆಕಾಶ್ ಮೃನಾಲ್ ಹಾಗೂ ಪಾರ್ಥ ಸಾಲುಂಕೆ ಅವರನ್ನೊಳಗೊಂಡ ಪುರುಷರ ತಂಡವು ಚಿನ್ನದ ಪದಕ ತನ್ನದಾಗಿಸಿಕೊಂಡಿದೆ.
ರಿಕರ್ವ್ ಮಿಕ್ಸೆಡ್ ಟೀಮ್ ಸ್ಪರ್ಧೆಯಲ್ಲಿ ಚೈನೀಸ್ ತೈಪೆಯ ಕೈ-ಹಾನ್ ಯಾಂಗ್ ಹಾಗೂ ಝು-ಮಿನ್ ಸು ವಿರುದ್ಧ ಸೋಲನುಭವಿಸಿರುವ ಟಿಶಾ ಪುನಿಯಾ ಹಾಗೂ ಸಾಲುಂಕೆ ಬೆಳ್ಳಿಗೆ ತೃಪ್ತಿಪಟ್ಟರು.

ಒಟ್ಟಾರೆ ಭಾರತವು ಐದು ಚಿನ್ನ, ಮೂರು ಬೆಳ್ಳಿ ಹಾಗೂ ಒಂದು ಕಂಚಿನ ಪದಕವನ್ನು ಗೆದ್ದುಕೊಂಡಿದೆ.

Similar News