​ಅಸ್ಸಾಂ ಎನ್‌ಆರ್‌ಸಿ ಪ್ರಕ್ರಿಯೆಯಲ್ಲಿ ಅಕ್ರಮ: ಸಿಎಜಿ ವರದಿ

Update: 2022-12-26 02:45 GMT

ಹೊಸದಿಲ್ಲಿ: ಅಸ್ಸಾಂನಲ್ಲಿ ನಡೆದ ರಾಷ್ಟ್ರೀಯ ಪೌರತ್ವ ನೋಂದಣಿ (NRC) ನವೀಕರಣದಲ್ಲಿ ದೊಡ್ಡ ಪ್ರಮಾಣದ ಅಕ್ರಮ ನಡೆದಿದೆ ಎಂದು ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (CAG) ವರದಿ ಬಹಿರಂಗಪಡಿಸಿದೆ.

ಅಸ್ಸಾಂನಲ್ಲಿ ವಾಸಿಸುವ ಭಾರತೀಯ ನಾಗರಿಕರ ನೋಂದಣಿ ಕಾರ್ಯ ಸುಪ್ರೀಂಕೋರ್ಟ್ (Supreme Court) ಮೇಲ್ವಿಚಾರಣೆಯಲ್ಲಿ ನಡೆದಿದ್ದು, ದಾಖಲೆ ರಹಿತ ವಸಲೆಗಾರರನ್ನು ರಾಜ್ಯದಿಂದ ಸ್ಥಳಾಂತರಿಸಲು ಉದ್ದೇಶಿಸಲಾಗಿತ್ತು. ಎನ್‌ಆರ್‌ಸಿ ನವೀಕರಣ ಪ್ರಕ್ರಿಯೆ 2019ರ ಆಗಸ್ಟ್ 31ರಂದು ಮುಕ್ತಾಯವಾಗಿದ್ದು, ಅಂತಿಮವಾಗಿ ಪಟ್ಟಿ ಪ್ತಕಟವಾದಾಗ 19 ಲಕ್ಷಕ್ಕೂ ಅಧಿಕ ಅರ್ಜಿದಾರರು ನೋಂದಣಿಯಿಂದ ಹೊರಗುಳಿದಿದ್ದರು ಎಂಬ ಆರೋಪ ಕೇಳಿಬಂದಿತ್ತು.

ರಾಜ್ಯ ಸರ್ಕಾರ ಈ ಅಂತಿಮ ಎನ್‌ಆರ್‌ಸಿ ಕರಡನ್ನು ದೋಷಯುಕ್ತ ಎಂದು ಕರೆದಿತ್ತು ಹಾಗೂ ಈ ಪರಿಷ್ಕರಣೆ ವೇಳೆ ಹಲವು ಮಂದಿ ಅಸ್ಸಾಂ ದೇಶೀಯ ಜನರನ್ನು ಕೈಬಿಡಲಾಗಿದೆ ಎಂದು ಆಪಾದಿಸಿತ್ತು. ಕಳೆದ ಶನಿವಾರ ಅಸ್ಸಾಂ ವಿಧಾನಸಭೆಯಲ್ಲಿ ಸಿಎಜಿ ವರದಿಯನ್ನು ಮಂಡಿಸಲಾಗಿದ್ದು, ಈ ಪರಿಷ್ಕರಣೆ ಯೋಜನೆಯನ್ನು ಕೈಗೊಳ್ಳುವ ಅವಧಿ ವಿಸ್ತರಣೆಯಾದ ಕಾರಣ ವೆಚ್ಚ 2014ರಲ್ಲಿ ಇದ್ದ 288.18 ಕೋಟಿ ರೂಪಾಯಿಯಂದ 2022 ಮಾರ್ಚ್ ವೇಳೆಗೆ 1602.66 ಕೋಟಿ ರೂಪಾಯಿಗೆ ಹೆಚ್ಚಿದೆ ಎಂದು ಸಿಎಜಿ ವರದಿ ಆಕ್ಷೇಪಿಸಿದೆ.

ಇದಕ್ಕೆ ಮಂಜೂರಾದ ಅನುದಾನ ಬಳಕೆಯಲ್ಲಿ ದೊಡ್ಡ ಪ್ರಮಾಣದ ಅವ್ಯವಹಾರಗಳು ನಡೆದಿವೆ. ಈ ಪ್ರಕ್ರಿಯೆಯಲ್ಲಿ ಸಣ್ಣ ಪೂರೈಕೆದಾರರಿಗೆ ಅಧಿಕ ಹಾಗೂ ಒಪ್ಪಲಾಗದ ಪಾವತಿಗಳು ನಡೆದಿವೆ ಎಂದು ವಿವರಿಸಿದೆ.

ಪರಿಷ್ಕರಣೆಗೆ ಬಳಸಲಾದ ಪ್ರಧಾನ ಸಾಫ್ಟ್‌ವೇರ್‌ಗೆ ಹಾನಿಕಾರಕವಾಗುವ ರೀತಿಯಲ್ಲಿ 215 ಪೂರಕ ಸಾಫ್ಟ್‌ವೇರ್‌ಗಳನ್ನು ಯಾವುದೇ ಕಾರ್ಯಯೋಜನೆ ಇಲ್ಲದೇ ಬಳಸಲಾಗಿದೆ ಎನ್ನುವುದನ್ನೂ ಸಿಎಜಿ ವರದಿ ಹೇಳಿದೆ.

ಇದನ್ನೂ ಓದಿ: ವಿರಾಟ್ ಕೊಹ್ಲಿ ಅವರಿಂದ ‘ವಿಶೇಷ ಸ್ಮರಣಿಕೆ’ ಸ್ವೀಕರಿಸಿದ ಮೆಹಿದಿ ಹಸನ್

Similar News