ಇಸ್ಲಾಮಾಬಾದ್‌ನ ಮ್ಯಾರಿಯಟ್‌ ಹೋಟೆಲ್‌ಗೆ ತೆರಳದಂತೆ ತನ್ನ ನಾಗರಿಕರಿಗೆ ಸೂಚಿಸಿದ ಅಮೆರಿಕಾ: ಕಾರಣವೇನು?

Update: 2022-12-26 14:17 GMT

 ವಾಷಿಂಗ್ಟನ್:‌ ಪಾಕಿಸ್ತಾನದ ರಾಜಧಾನಿ ಇಸ್ಲಾಮಬಾದ್‌ನಲ್ಲಿರುವ ಮ್ಯಾರಿಯಟ್‌ ಹೋಟೆಲ್‌ನಲ್ಲಿರುವ ತನ್ನ ನಾಗರಿಕರ ಮೇಲೆ ಸಂಭಾವ್ಯ ಉಗ್ರ ದಾಳಿ ನಡೆಯುವ ಕುರಿತು  ಅಮೆರಿಕಾದ ರಾಯಭಾರ ಕಚೇರಿ ರವಿವಾರ ಎಚ್ಚರಿಕೆ ನೀಡಿದೆ.

ಪೊಲೀಸ್‌ ಅಧಿಕಾರಿಯೊಬ್ಬರು ಆತ್ಮಹತ್ಯಾ ಸ್ಫೋಟ ಪ್ರಕರಣದಲ್ಲಿ ಹತರಾದ ನಂತರ  ಇಸ್ಲಾಮಾಬಾದ್‌ನಲ್ಲಿ ಆಡಳಿತವು ಎರಡು ವಾರಗಳ ಕಾಲ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದೇ ಅಲ್ಲದೆ 48 ಗಂಟೆಗಳ ಕಾಲ ನಗರದಲ್ಲಿ ಹೈ-ಅಲರ್ಟ್‌ ಘೋಷಿಸಿದ ನಂತರ ಅಮೆರಿಕಾ ರಾಯಭಾರ ಕಚೇರಿಯ ಎಚ್ಚರಿಕೆ ಬಂದಿದೆ.

ಆತ್ಮಹತ್ಯಾ ಬಾಂಬ್‌ ಸ್ಫೋಟದ ಘಟನೆಗೆ ತೆಹರೀಕ್-ಇ-ತಾಲಿಬಾನ್‌ ಪಾಕಿಸ್ತಾನ್‌ ಹೊಣೆ ಹೊತ್ತುಕೊಂಡಿದೆ. ಅಜ್ಞಾತ ವ್ಯಕ್ತಿಗಳು ಇಸ್ಲಾಮಾಬಾದ್‌ನಲ್ಲಿರುವ ಮ್ಯಾರಿಯಟ್‌ ಹೋಟೆಲ್‌ನಲ್ಲಿರುವ ಅಮೆರಿಕನ್‌ ನಾಗರಿಕರ ಮೇಲೆ ರಜಾಕಾಲದಲ್ಲಿ ಯಾವಾಗಲಾದರೂ ಸಂಭಾವ್ಯ ದಾಳಿ ನಡೆಸಬಹುದೆಂಬ ಮಾಹಿತಿ ಅಮೆರಿಕಾ ಸರಕಾರಕ್ಕಿದೆ. ತಕ್ಷಣದಿಂದ ಜಾರಿಗೆ ಬರುವಂತೆ ಹೋಟೆಲ್‌ಗೆ ಭೇಟಿ ನೀಡುವುದನ್ನು ಎಲ್ಲಾ ಅಮೆರಿಕ್‌ ಸಿಬ್ಬಂದಿಯನ್ನು ಇಸ್ಲಾಮಾಬಾದ್‌ನಲ್ಲಿರುವ ರಾಯಭಾರ ಕಚೇರಿ ನಿರ್ಬಂಧಿಸಿದೆ.

ರಜಾ ಕಾಲದಲ್ಲಿ ಅನಗತ್ಯ ಎಲ್ಲಿಗೂ ಹೊರಗೆ ಹೋಗದಂತೆ ತನ್ನ ರಾಯಭಾರ ಕಚೇರಿಯ ಸಿಬ್ಬಂದಿಗೂ ಅಮೆರಿಕಾ ಸೂಚಿಸಿದೆ.

ಅಮೆರಿಕಾ ಹೊರತಾಗಿ ಇಂಗ್ಲೆಂಡ್‌ ಕೂಡ ತನ್ನ ನಾಗರಿಕರಿಗೆ ಇಸ್ಲಾಮಾಬಾದ್‌ನಲ್ಲಿರುವ ಮ್ಯಾರಿಯಟ್‌ ಹೋಟೆಲ್‌ಗೆ  ತೆರಳದಂತೆ ಹಾಗೂ ಹೆಚ್ಚು ಜನಜಂಗುಳಿಯಿರುವ ಹಾಗೂ ಅಸುರಕ್ಷಿತ ಸ್ಥಳಗಳಿಗೆ ತೆರಳದಂತೆ ಸೂಚಿಸಿದೆ.

Similar News