ಭಾರತಕ್ಕೆ ಪಾಕ್ ಕ್ರಿಕೆಟ್ ತಂಡ: ನೂತನ ಪಿಸಿಬಿ ಅಧ್ಯಕ್ಷ ಹೇಳಿದ್ದೇನು?

Update: 2022-12-27 02:12 GMT

ಕರಾಚಿ: ಮುಂದಿನ ವರ್ಷ ಭಾರತದಲ್ಲಿ ನಡೆಯುವ ಏಕದಿನ ವಿಶ್ವಕಪ್ ಪಂದ್ಯಾವಳಿಗೆ ಪಾಕಿಸ್ತಾನ ಕ್ರಿಕೆಟ್ ತಂಡವನ್ನು ಕಳುಹಿಸುವ ಬಗ್ಗೆ ಸರ್ಕಾರಿ ಮಟ್ಟದಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ನೂತನ ಅಧ್ಯಕ್ಷ ನಜಾಮ್ ಸೇಥಿ ಹೇಳಿದ್ದಾರೆ.

ಪಾಕಿಸ್ತಾನದಲ್ಲಿ ನಡೆಯುವ ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ಭಾರತ ಕ್ರಿಕೆಟ್ ತಂಡ ಭಾಗವಹಿಸದಿದ್ದರೆ, ಭಾರತದಲ್ಲಿ ನಡೆಯುವ ವಿಶ್ವಕಪ್ ಪಂದ್ಯಾವಳಿಯಿಂದ ಹಿಂದೆ ಸರಿಯುವ ವಿಚಾರವನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ ಎಂದು ಹಿಂದಿನ ಪಿಸಿಬಿ ಅಧ್ಯಕ್ಷ ರಮೀಝ್ ರಾಜಾ ಹೇಳಿಕೆ ನೀಡಿರುವ ಸಂಬಂಧ ಸ್ಪಷ್ಟನೆ ನೀಡಿರುವ ನೂತನ ಅಧ್ಯಕ್ಷರು, "ಭಾರತಕ್ಕೆ ತೆರಳುವುದು ಬೇಡ ಎಂದು ಸರ್ಕಾರ ಹೇಳಿದರೆ ನಾವು ಹೋಗುವುದಿಲ್ಲ" ಎಂದು ಸ್ಪಷ್ಟಪಡಿಸಿದರು.

ಪಾಕಿಸ್ತಾನ ಮತ್ತು ಭಾರತದ ನಡುವಿನ ಕ್ರಿಕೆಟ್ ಸಂಬಂಧದ ವಿಚಾರದಲ್ಲಿ ಸ್ಪಷ್ಟವಾಗಿರೋಣ. ಆಡಬೇಕೇ ಅಥವಾ ಪ್ರವಾಸ ಕೈಗೊಳ್ಳಬೇಕೇ, ಕೈಗೊಳ್ಳಬೇಡವೇ ಎಂಬ ಬಗ್ಗೆ ಸರ್ಕಾರಿ ಮಟ್ಟದಲ್ಲಿ ನಿರ್ಧಾರ ಕೈಗೊಳ್ಳಬೇಕಾಗುತ್ತದೆ" ಎಂದು ಕರಾಚಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸೇಥಿ ಹೇಳಿದರು.

"ಇವು ಸರ್ಕಾರಿ ಮಟ್ಟದಲ್ಲಿ ಕೈಗೊಳ್ಳಬೇಕಾದ ನಿರ್ಧಾರಗಳು. ಪಿಸಿಬಿ ಕೇವಲ ಸ್ಪಷ್ಟನೆಯನ್ನಷ್ಟೇ ಕೇಳುತ್ತದೆ" ಎಂದರು. ಮುಂದಿನ ವರ್ಷ ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯುವ ಏಷ್ಯಾ ಕಪ್ ವಿವಾದದ ಸಂಬಂಧ ಏಷ್ಯನ್ ಕ್ರಿಕೆಟ್ ಮಂಡಳಿ ಜತೆ ಮಾತುಕತೆ ನಡೆಸುತ್ತಿದೆ ಎಂದು ತಿಳಿಸಿದರು.

Similar News