ಎಂ.ಎಲ್. ಸಾಮಗರಿಗೆ 2023ರ ಸಾಲಿನ "ಪಟ್ಲ ಪ್ರಶಸ್ತಿ": ಮೇ 28ಕ್ಕೆ ಅಡ್ಯಾರ್ ನಲ್ಲಿ "ಪಟ್ಲ ಸಂಭ್ರಮ"

Update: 2022-12-27 06:04 GMT

ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಆರನೇ ವರ್ಷದ ಯಕ್ಷಧ್ರುವ ಪಟ್ಲ ಸಂಭ್ರಮ 2023 ಸಮಾರಂಭವು ಮೇ 28ರಂದು ಅಡ್ಯಾರ್ ಗಾರ್ಡನ್ ನಲ್ಲಿ ನಡೆಯಲಿದೆ. 2023ರ ಸಾಲಿನ ಪಟ್ಲ ಪ್ರಶಸ್ತಿಯನ್ನು ಯಕ್ಷಗಾನ ಕಲಾವಿದ, ತಾಳೆ ಮದ್ದಲೆ ಅರ್ಥಧಾರಿ ತೆಂಕು- ಬಡಗಿನ ಕಲಾವಿದ ಎಂ.ಎಲ್. ಸಾಮಗ ಅವರಿಗೆ ನೀಡಲಾಗುವುದು ಎಂದು ಪಟ್ಲ ಫೌಂಡೇಶನ್ ಟ್ರಸ್ಟ್ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ ಶೆಟ್ಟಿ ತಿಳಿಸಿದ್ದಾರೆ.

ಪತ್ತುಮುಡಿಯಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಸಭೆಯ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಪಟ್ಲ ಸಂಭ್ರಮದ ಅಧ್ಯಕ್ಷತೆಯನ್ನು ಟ್ರಸ್ಟ್ ನ ಗೌರವಾಧ್ಯಕ್ಷ ಕನ್ಯಾನ ಸದಾಶಿವ ಶೆಟ್ಟಿ ವಹಿಸಲಿದ್ದಾರೆ. ಸಮಾರಂಭದಲ್ಲಿ ಸತ್ಪಾತ್ರ ಕಲಾವಿದರಿಗೆ ನೆರವು, ಅಪಘಾತ ವಿಮಾ ಯೋಜನೆ, ಕಲಾವಿದರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ವಿತರಣೆ, ವೈದ್ಯಕೀಯ, ರಕ್ತದಾನ ಶಿಬಿರ, ಹಾಗೂ ಯಕ್ಷಗಾನ ಮನರಂಜನಾ ಕಾರ್ಯಕ್ರಮ ನಡೆಯಲಿದೆ ಎಂದು ಪಟ್ಲ ಸತೀಶ್ ಶೆಟ್ಟಿ ತಿಳಿಸಿದರು.

ಪಟ್ಲ ಫೌಂಡೇಶನ್ ಟ್ರಸ್ಟ್ ಕಲಾವಿದರ ಪಾಲಿಗೆ ಬೆಳಕಾಗಿ ಕೆಲಸ ಮಾಡುತ್ತಿದೆ. ಕಲಾವಿದರ ಕಷ್ಟಗಳಿಗೆ ಸ್ಪಂದಿಸುವ ಪಟ್ಲ ಟ್ರಸ್ಟ್ ಗೆ ಎಲ್ಲರ ಸಹಕಾರ ಅಗತ್ಯ. ಪಟ್ಲ ಫೌಂಡೇಶನ್ ನ ಎಲ್ಲಾ ಘಟಕಗಳು ಸಕ್ರೀಯವಾಗಿ ಕೆಲಸ ಮಾಡಿದಾಗ ಸಂಸ್ಥೆ ಉತ್ತಮ ರೀತಿಯಲ್ಲಿ ಬೆಳೆಯಲು ಸಾಧ್ಯವಾಗುತ್ತದೆ ಎಂದು ಪಟ್ಲ ಫೌಂಡೇಶನ್ ಟ್ರಸ್ಟ್ ನ ಗೌರವಾಧ್ಯಕ್ಷ ಕನ್ಯಾನ ಸದಾಶಿವ ಶೆಟ್ಟಿ ತಿಳಿಸಿದರು.

ಪಟ್ಲ  ಫೌಂಡೇಶನ್ ಟ್ರಸ್ಟ್ ಕಲಾವಿದರ ಬಗ್ಗೆ ಇಟ್ಟ ಕಾಳಜಿ  ಮತ್ತು ಸಂಕಷ್ಟದಲ್ಲಿರುವ ಕಲಾವಿದರನ್ನು ಗುರುತಿಸಿ ನೆರವು ನೀಡುತ್ತಿರುವುದು ಮತ್ತು ಗೌರವಿಸುತ್ತಿರುವುದು ಶ್ಲಾಘನೀಯ ಕೆಲಸವಾಗಿದೆ. ಇದು ನಿರಂತರ ನಡೆಯಲಿ, ಎಲ್ಲರ ಸಹಕಾರವೂ ಬೇಕು ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ತಿಳಿಸಿದರು.

ಇದೇ ಸಂದರ್ಭದಲ್ಲಿ ಎಂ.ಆರ್.ಜಿ ಗ್ರೂಪ್ ಪಟ್ಲ ಟ್ರಸ್ಟ್ ಗೆ ನೀಡಿದ 5 ಲಕ್ಷ ರೂ. ದೇಣಿಗೆಯನ್ನು ಪ್ರಸಾದ್ ಶೆಟ್ಟಿ ಅವರು ಟ್ರಸ್ಟ್ ನ ಗೌರವಾಧ್ಯಕ್ಷ ಕನ್ಯಾನ ಸದಾಶಿವ ಶೆಟ್ಟಿ ಅವರಿಗೆ  ಹಸ್ತಾಂತರಿಸಿದರು.

ಬೆಟ್ಟಂಪಾಡಿ ಬಾಳಪ್ಪ ಶೆಟ್ಟಿ ಪ್ರತಿಷ್ಠಾನದ ಪರವಾಗಿ ಸುಂದರ ಶೆಟ್ಟಿ ಬೆಟ್ಟಂಪಾಡಿ ಟ್ರಸ್ಟಿಯಾಗಿ ನೇಮಕಗೊಂಡರು. ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ, ಕೋಶಾಧಿಕಾರಿ ಸಿ.ಎ. ಸುದೇಶ್   ಕುಮಾರ್ ರೈ, ಡಾ. ಗಣೇಶ್ ಎಚ್.ಕೆ, ಗಿರೀಶ್ ಎಂ. ಶೆಟ್ಟಿ ಕಟೀಲು, ಸುಧಾಕರ ಪೂಂಜ, ಸವಣೂರು ಸೀತಾರಾಮ ರೈ, ಪಟ್ಲ ಮಹಾಬಲ ಶೆಟ್ಟಿ, ಪ್ರಸಾದ್ ಶೆಟ್ಟಿ, ಜಯರಾಮ ಶೇಖ, ಜಗನ್ನಾಥ ಶೆಟ್ಟಿ ಬಾಳ, ಚಿಕ್ಕಪ್ಪ ನಾಯ್ಕ್, ಕರುಣಾಕರ ರೈ, ಸಂತೋಷ್ ಶೆಟ್ಟಿ, ವಿಜಯ ಶೆಟ್ಟಿ, ಜಯಶೀಲ ಅಡ್ಯಂತಾಯ, ದಾಮೋದರ ರೈ,  ಪೂರ್ಣಿಮಾ ಶೆಟ್ಟಿ, ಆರತಿ ಆಳ್ವ, ಅನಿತಾ ಪಿಂಟೋ, ಪ್ರದೀಪ್ ಆಳ್ವ, ರವಿ ಶೆಟ್ಟಿ ಅಶೋಕನಗರ ಮೊದಲಾದವರು ಉಪಸ್ಥಿತರಿದ್ದರು.

Similar News