ಫಿಫಾ ವಿಶ್ವಕಪ್‌ನಲ್ಲಿ ರೊನಾಲ್ಡೊಗೆ ರಾಜಕೀಯ ಪ್ರೇರಿತ ನಿಷೇಧ ಹೇರಲಾಗಿತ್ತು ಎಂದ ಟರ್ಕಿ ಅಧ್ಯಕ್ಷ

Update: 2022-12-27 07:50 GMT

ಅಂಕಾರ: ಪೋರ್ಚುಗೀಸ್ ಫುಟ್‌ಬಾಲ್ ತಾರೆ ಕ್ರಿಸ್ಟಿಯಾನೊ ರೊನಾಲ್ಡೊಗೆ ಈ ಬಾರಿಯ ಫಿಫಾ ವಿಶ್ವಕಪ್‌ನಲ್ಲಿ ರಾಜಕೀಯ ಪ್ರೇರಿತ ನಿಷೇಧ ಹೇರಲಾಗಿತ್ತು ಎಂದು ಟರ್ಕಿಯ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ದೊಗನ್ ಹೇಳಿದ್ದಾರೆ ಎಂದು ವರದಿಯಾಗಿದೆ. ಖತರ್‌ನಲ್ಲಿ ಅಂತ್ಯಗೊಂಡ ವಿಶ್ವಕಪ್‌ನಲ್ಲಿ ರೊನಾಲ್ಡೊರನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ ಎಂದು ಮಾಧ್ಯಮ ಸಂಸ್ಥೆಗಳು ವರದಿ ಮಾಡಿವೆ.

ಮೊರೊಕ್ಕೊ ಎದುರಿನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 37 ವರ್ಷ ವಯಸ್ಸಿನ ರೊನಾಲ್ಡೊರನ್ನು ಪೋರ್ಚುಗಲ್ ತಂಡ ಬದಲಿ ಆಟಗಾರನನ್ನಾಗಿ ಆಡಿಸಿತ್ತು. ಆ ಪಂದ್ಯದಲ್ಲಿ ಮೊರೊಕ್ಕೊ ಎದುರು 1-0 ಅಂತರದಲ್ಲಿ ಪೋರ್ಚುಗಲ್ ತಂಡ ಪರಾಭವಗೊಂಡಿತ್ತು. ಇದಕ್ಕೂ ಮುನ್ನ ಸ್ವಿಝರ್ಲೆಂಡ್ ಎದುರು ನಡೆದಿದ್ದ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲೂ ಮ್ಯಾಂಚೆಸ್ಟರ್‌ ಯುನೈಟೆಡ್‌ ಮತ್ತು ರಿಯಲ್ ಮ್ಯಾಡ್ರಿಡ್ ಕ್ಲಬ್‌ಗಳ ತಾರೆ ರೊನಾಲ್ಡೊರಿಗೆ ಪೋರ್ಚುಗಲ್ ತಂಡದ 11ರ ಬಳಗದಲ್ಲಿ ಅವಕಾಶ ದೊರೆತಿರಲಿಲ್ಲ.

ಐದು ವಿವಿಧ ವಿಶ್ವಕಪ್‌ಗಳಲ್ಲಿ ಗೋಲು ಗಳಿಸಿದ ಪ್ರಥಮ ಆಟಗಾರನಾಗಿ ಹೊಮ್ಮಿದ್ದ ರೊನಾಲ್ಡೊ, ಖತರ್ ವಿಶ್ವಕಪ್‌ನಿಂದ ಪೋರ್ಚುಗಲ್ ತಂಡ ನಿರ್ಗಮಿಸಿದ ನಂತರ ಕಣ್ಣೀರಿನೊಂದಿಗೆ ಅಲ್ಲಿಂದ ತವರಿಗೆ ಮರಳಿದ್ದರು.

ಪೂರ್ವ ಎರ್ಝುರುಮ್ ಪ್ರಾಂತ್ಯದಲ್ಲಿ ರವಿವಾರ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ್ದ ಎರ್ದೊಗನ್, "ಅವರು ರೊನಾಲ್ಡೊರನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ. ದುರದೃಷ್ಟವಶಾತ್ ಅವರು ಆತನ ಮೇಲೆ ರಾಜಕೀಯ ಪ್ರೇರಿತ ನಿಷೇಧ ಹೇರಿದರು" ಎಂದು ಹೇಳಿದ್ದಾರೆ ಎಂದು Al Jazeera ವರದಿ ಮಾಡಿದೆ.

"ರೊನಾಲ್ಡೊನಂಥ ಫುಟ್‌ಬಾಲ್ ಆಟಗಾರನನ್ನು ಪಂದ್ಯ ಮುಕ್ತಾಯವಾಗಲು ಕೇವಲ 30 ನಿಮಿಷ ಬಾಕಿಯಿರುವಾಗ ಮೈದಾನಕ್ಕೆ ಕಳಿಸುವ ಮೂಲಕ ಆತನ ಮಾನಸಿಕ ಸ್ಥೈರ್ಯವನ್ನು ನಾಶ ಮಾಡಲಾಯಿತು ಮತ್ತು ಆತನ ಶಕ್ತಿಯನ್ನು ವ್ಯರ್ಥಗೊಳಿಸಲಾಯಿತು" ಎಂದು ಎರ್ದೊಗನ್ ಹೇಳಿದ್ದಾರೆ ಎಂದು ಸ್ಪ್ಯಾನಿಷ್ ಪ್ರಕಟಣಾ ಸಂಸ್ಥೆ Marca ವರದಿ ಮಾಡಿದೆ‌.

ಇದೇ ಸಂದರ್ಭದಲ್ಲಿ ಅವರು, ಫೆಲೆಸ್ತೀನ್ ಪ್ರಜೆಗಳ ಹೋರಾಟದ ಪರ ನಿಂತಿರುವ ವ್ಯಕ್ತಿಗಳ ಪೈಕಿ ರೊನಾಲ್ಡೊ ಕೂಡಾ ಒಬ್ಬರು ಎಂದು ಶ್ಲಾಘಿಸಿದ್ದಾರೆ.

ಆದರೆ, ಇಸ್ರೆಲ್-ಫೆಲೆಸ್ತೀನ್ ಬಿಕ್ಕಟ್ಟಿನ ಕುರಿತು ರೊನಾಲ್ಡೊ ಈವರೆಗೆ ಯಾವುದೇ ಹೇಳಿಕೆ ಬಿಡುಗಡೆ ಮಾಡಿಲ್ಲ ಎಂದು Al Jazeera ಪ್ರತಿಪಾದಿಸಿದೆ.

Similar News