ಇರಾನ್ ನಲ್ಲಿ ಅಂತರ್ಜಾಲ ನಿಯಂತ್ರಣದ ನಡುವೆಯೇ 100 ಸ್ಟಾರ್ಲಿಂಕ್ ಇಂಟರ್ನೆಟ್ ಟರ್ಮಿನಲ್ ಸಕ್ರಿಯ: ಎಲನ್ ಮಸ್ಕ್

Update: 2022-12-27 17:21 GMT

ಸ್ಯಾನ್ಫ್ರಾನ್ಸಿಸ್ಕೊ, ಡಿ.27: ಆಡಳಿತ ವಿರೋಧಿ ಪ್ರತಿಭಟನೆ ಭುಗಿಲೆದ್ದಿರುವ ಇರಾನ್ ನಲ್ಲಿ ಅಂತರ್ಜಾಲ ಸಂಪರ್ಕಕ್ಕೆ ಸರಕಾರ ಕಡಿವಾಣಹಾಕಿರುವ ಹಿನ್ನೆಲೆಯಲ್ಲಿ ಅಲ್ಲಿನ ಜನತೆಗೆ ಅಂತರ್ಜಾಲ ಸಂಪರ್ಕ ಲಭಿಸುವಂತೆ ಮಾಡಲು ತನ್ನ ಸಂಸ್ಥೆಯ 100 ಸ್ಟಾರ್ಲಿಂಕ್ ಇಂಟರ್ನೆಟ್ ಟರ್ಮಿನಲ್ ಗಳು ಆ ದೇಶದಲ್ಲಿ ಕಾರ್ಯಾಚರಿಸುತ್ತಿವೆ ಎಂದು ‘ಸ್ಪೇಸ್ ಎಕ್ಸ್ ’(space x) ಕಂಪೆನಿಯ ವರಿಷ್ಠ ಎಲನ್ ಮಸ್ಕ್(Elon Musk) ಸೋಮವಾರ ಬಹಿರಂಗಪಡಿಸಿದ್ದಾರೆ.

‘ಸ್ಪೇಸ್ ಎಕ್ಸ್ ’ನ ಅಂಗಸಂಸ್ಥೆಯಾದ ಸ್ಟಾರ್ಲಿಂಕ್ಸ್ ಬಳಿ ಬಳಿ 2 ಸಾವಿರಕ್ಕೂ ಅಧಿಕ ಸಣ್ಣ ಉಪಗ್ರಹಗಳಿದ್ದು, ಅವು ಭೂಮಿಯಿಂದ ಕೆಲವೇ ನೂರು ಕಿ.ಮೀ.ಮೇಲಿನ ಕಕ್ಷೆಯಲ್ಲಿ ಪರಿಭ್ರಮಿಸುತ್ತದೆ. ಅವು ಭೂಮಿಯಲ್ಲಿರುವ ಬಳಕೆದಾರರಿಗೆ ಸುಲಭವಾಗಿ ಇಂಟರ್ನೆಟ್ ಸೌಲಭ್ಯವನ್ನು ಒದಗಿಸಿಕೊಡುತ್ತವೆ.

ಭೂಮಿಯಲ್ಲಿರುವ ಸ್ಟಾರ್ಲಿಂಕ್ ಟರ್ಮಿನಲ್ ಗಳ ಮೂಲಕ ಬಳಕೆದಾರರು ಇಂಟರ್ನೆಟ್ ಸೌಲಭ್ಯ ಪಡೆಯಲು ಸಾಧ್ಯವಾಗುತ್ತದೆ.

ಈ ವರ್ಷದ ಆರಂಭದಲ್ಲಿ ಮಸ್ಕ್ ಅವರು ರಶ್ಯದ ಆಕ್ರಮಣಕ್ಕೊಳಗಾಗಿರುವ ಉಕ್ರೇನ್ ಗೆ ಸಾವಿರಾರು ಸ್ಟಾರ್ಲಿಂಕ್ ಟರ್ಮಿನಲ್ ಗಳನ್ನು ರವಾನಿಸುವ ಮೂಲಕ ಜಾಗತಿಕ ಮಟ್ಟದ ಪ್ರಶಂಸೆಗೆ ಪಾತ್ರರಾಗಿದ್ದರು.

ಇರಾನ್ ನಲ್ಲಿ 22 ವರ್ಷದ ಕುರ್ದಿಷ್ ಯುವತಿ ಮಹಸಾ ಅಮಿನಿ ಅವರ ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ ಘಟನೆಯ ಬಳಿಕ ಇರಾನ್ನಲ್ಲಿ ಆಡಳಿತ ವಿರೋಧಿ ಪ್ರತಿಭಟನೆ ವ್ಯಾಪಕವಾಗಿದೆ.

ಇರಾನ್ ಆಡಳಿತವು ಈಗಾಗಲೇ 14 ಸಾವಿರ ಮಂದಿಯನ್ನು ಬಂಧಿಸಿದೆ. 469ಕ್ಕೂ ಅಧಿಕ ಪ್ರತಿಭಟನಕಾರರು ಭದ್ರತಾಪಡೆಗಳಿಂದ ಹತ್ಯೆಯಾಗಿದ್ದಾರೆಂದು ನಾರ್ವೆ ಮೂಲದ ಇರಾನ್ ಮಾನವಹಕ್ಕುಗಳ ಸಂಘಟನೆ ವರದಿ ಮಾಡಿದೆ.

Similar News