ತೈವಾನ್ ನಲ್ಲಿ ನಾಗರಿಕರಿಗೆ 4 ತಿಂಗಳ ಕಡ್ಡಾಯ ಮಿಲಿಟರಿ ಸೇವೆ: ಇನ್ನೂ ಒಂದು ವರ್ಷ ವಿಸ್ತರಣೆ

Update: 2022-12-27 17:36 GMT

ತೈಪೆ,ಡಿ.21: ತೈವಾನ್ ನ ಸಮುದ್ರ ಹಾಗೂ ವಾಯುಪ್ರದೇಶದ ಸುತ್ತಲೂ ತಾನು ‘ದಾಳಿ ಕವಾಯತು’ಗಳನ್ನು ನಡೆಸಿರುವುದಾಗಿ ಚೀನಾ ಘೋಷಿಸಿದ ಕೆಲವೇ ದಿನಗಳ ಬಳಿಕ ತೈವಾನ್, ತನ್ನ ನಾಗರಿಕರಿಗೆ ನಾಲ್ಕು ತಿಂಗಳುಗಳ ಕಡ್ಡಾಯ ಮಿಲಿಟರಿ ಸೇವೆ ನಿಯಮವನ್ನು ಇನ್ನೂ ಒಂದು ವರ್ಷದವರೆಗೆ ವಿಸ್ತರಿಸಿದೆ. 2024ರ ವೇಳೆಗೆ ಕಡ್ಡಾಯ ಸೇನಾ ಸೇವೆಯನ್ನು ಒಂದು ವರ್ಷಕ್ಕೆ ವಿಸ್ತರಿಸಲು ಕೂಡಾ ಅದು ನಿರ್ಧರಿಸಿದೆ.

 ತೈವಾನ್ ಚೀನಾದೊಂದಿಗೆ ಏಕೀಕರಣಗೊಳ್ಳಬೇಕೆಂಬ ಚೀನಾದ ಪ್ರತಿಪಾದನೆಯ ನಡುವೆಯೇ ಈ ದ್ವೀಪ ರಾಷ್ಟ್ರವು ತನ್ನ ರಕ್ಷಣಾ ವ್ಯವಸ್ಥೆಯನ್ನು ಸದೃಢಗೊಳಿಸುವ ಉದ್ದೇಶದೊಂದಿಗೆ ಈ ನಿರ್ಧಾರವನ್ನು ಕೈಗೊಂಡಿದೆ ಎನ್ನಲಾಗಿದೆ.

ತೈವಾನ ಅಧ್ಯಕ್ಷೆ ತ್ಸಾಯಿ ಇಂಗ್-ವೆನ್(Tsai Ing-wen) ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ‘‘ ಚೀನಾದಿಂದ ಹೆಚ್ಚುತ್ತಿರುವ ಬೆದರಿಕೆಯನ್ನು ಎದುರಿಸಲು ದ್ವೀಪವು ಸನ್ನದ್ಧವಾಗಿರಬೇಕಾದ ಅಗತ್ಯವಿದೆ ಎಂದು ಹೇಳಿದ್ದಾರೆ. ಪ್ರಸಕ್ತ ನಾಲ್ಕು ತಿಂಗಳುಗಳ ಅವಧಿಯ ಮಿಲಿಟರಿ ಸೇವೆಯು ತ್ವರಿತವಾದ ಹಾಗೂ ಸದಾ ಬದಲಾಗುತ್ತಿರುವ ಪರಿಸ್ಥಿತಿಗೆ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ’’ಎಂದಾಕೆ ಹೇಳಿದ್ದಾರೆ. ‘‘2024ರಿಂದ ನಾಗರಿಕರಿಗೆ ಒಂದು ವರ್ಷದ ಅವಧಿಯ ಕಡ್ಡಾಯ ಮಿಲಿಟರಿ ಸೇವೆ ನಿಯಮವನ್ನು ಮರುಸ್ಥಾಪಿಸಲು ಕೂಡಾ ನಾವು ನಿರ್ಧರಿಸಿದ್ದೇವೆ ’’ ಎಂದವರು ಹೇಳಿದ್ದಾರೆ.

1949ರಲ್ಲಿ ತೈವಾನ್ ಕಡ್ಡಾಯ ಸೇನಾ ಸೇವೆ ನಿಯಮವನ್ನು ಅಂಗೀಕರಿಸಿದ ಬಳಿಕ ಆರಂಭದಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟ ತೈವಾನ್ನ ಎಲ್ಲಾ ಪುರುಷರು ಸೇನೆಯಲ್ಲಿ ಮೂರರಿಂದ ನಾಲ್ಕು ವರ್ಷಗಳ ಕಾಲ ಸವೆ ಸಲ್ಲಿಸಬೇಕಾಗಿತ್ತು. ಆದರೆ 1996ರ ಬಳಿಕ ಮಿಲಿಟರಿ ಸೇವೆಯ ಅವಧಿಯನ್ನು ಹಂತಹಂತವಾಗಿ ಕಡಿಮೆಗೊಳಿಸುತ್ತಾ ಬರಲಾಗಿತ್ತು. ಕಡ್ಡಾಯ ಸೇನಾ ಸೇವೆಯನ್ನು 2008ರಲ್ಲಿ ಒಂದು ವರ್ಷದ ಅವಧಿಗೆ ಇಳಿಸಲಾಗಿದ್ದರೆ,2018ರಲ್ಲಿ ಅದನ್ನು ನಾಲ್ಕು ತಿಂಗಳಿಗೆ ಸೀಮಿತಗೊಳಿಸಲಾಗಿತ್ತು.

ರವಿವಾರದಂದು ಚೀನಾವು ತನ್ನ 47 ವಿಮಾನಗಳನ್ನು ತೈವಾನ್ ಜಲಸಂಧಿಯಲ್ಲಿ ಮೆಡಿಯನ್ರೇಖೆ ಪ್ರದೇಶಕ್ಕೆ ಕಳುಹಿಸಿದ್ದು, ಇದು ಇತ್ತೀಚಿನ ತಿಂಗಳುಗಳಲ್ಲಿ ಚೀನಾದ ವಾಯುಪಡೆಯು ತೈವಾನ್ ವಾಯುರಕ್ಷಣಾ ವಲಯದೊಳಗೆ ನಡೆಸಿದ ಅತಿ ದೊಡ್ಡ ಒಳನುಸುಳುವಿಕೆಯಾಗಿದೆ.

ಚೀನಾವು ಪ್ರಸಕ್ತ 1.70 ಲಕ್ಷ ಸೇನಾ ಸಿಬ್ಬಂದಿಯನ್ನು ಹೊಂದಿದ್ದು, ಇದು ಚೀನಾಕಿಕಂತ ಹತ್ತುಪಟ್ಟು ಕಡಿಮೆಯಾಗಿದೆ. ತೈವಾನ್ನಲ್ಲಿ ಪ್ರತಿ ವರ್ಷ ಸುಮಾರು 1 ಲಕ್ಷ ಮಂದಿ 18 ವರ್ಷಕ್ಕೆ ಕಾಲಿರಿಸುತ್ತಾರೆಂದು ಅಂದಾಜಿಸಲಾಗಿದೆ.

Similar News