​ಮಾಜಿ ಫುಟ್ಬಾಲ್ ಆಟಗಾರನ ಕುಟುಂಬಿಕರಿಗೆ ದುಬೈಗೆ ಪ್ರಯಾಣಿಸದಂತೆ ತಡೆದ ಇರಾನ್: ಪ್ರಯಾಣದ ಮಧ್ಯೆ ವಿಮಾನ ವಾಪಸ್

Update: 2022-12-27 18:26 GMT

ಟೆಹರಾನ್,ಡಿ.27: ರಾಜಧಾನಿ ಟೆಹರಾನ್ನಿಂದ ದುಬೈಗೆ ಪ್ರಯಾಣಿಸುತ್ತಿದ್ದ ವಿಮಾನವನ್ನು ವಾಯುಮಾರ್ಗದ ಮಧ್ಯದಲ್ಲೇ ಇರಾನ್ಗೆ ಹಿಂತಿರುಗುವಂತೆ ಮಾಡಿ, ಅದರಲ್ಲಿದ್ದ ತನ್ನ ಕುಟುಂಬವನ್ನು ಕೆಳಗಿಳಿಸಲಾಯಿತೆಂದು ಇರಾನಿನ ಖ್ಯಾತ ಮಾಜಿ ಫುಟ್ಬಾಲ್ ಆಟಗಾರ ಅಲಿ ದಯಿ ತಿಳಿಸಿದ್ದಾರೆ.
 ಕುರ್ದಿಷ್ ಯುವತಿ ಮಸಾ ಅಮಿನಿ ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ ಘಟನೆಯ ಬಳಿಕ ಇರಾನ್ನಲ್ಲಿ ಭುಗಿಲೆದ್ದ ಆಡಳಿತ ವಿರೋಧಿ ಪ್ರತಿಭಟನೆಗೆ ಇರಾನ್ನ ಖ್ಯಾತ ಫುಟ್ಬಾಲ್ ಆಟಗಾರ ಅಲಿ ದಯೆಲ್ ಅವರು ಬೆಂಬಲ ವ್ಯಕ್ತಪಡಿಸಿದ್ದರು.

ಜರ್ಮನಿಯ ಬುಂಡೆಸ್ಲಿಗಾ ಫುಟ್ಬಾಲ್ ತಂಡದ ಮಾಜಿ ಆಟಗಾರನಾದ 53 ವರ್ಷ ವಯಸ್ಸಿನ ದಯಿ ಅವರು ಈವರೆಗೆ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಒಟ್ಟು 109 ಗೋಲುಗಳನ್ನು ಬಾರಿಸಿದ್ದರು.ರಾಜಧಾನಿ ಟೆಹರಾನ್ನಲ್ಲಿರುವ ಇಮಾಮ್ ಖೊಮೇನಿ ವಿಮಾನಿಲ್ದಾಣದಿಂದ ದಯಿ ಅವರ ಪತ್ನಿ ಹಾಗೂ ಪುತ್ರಿ ಮಹಾನ್ ಏರ್ಲೈನ್ಸ್ ಮೂಲಕ ದುಬೈಗೆ ಪ್ರಯಾಣಿಸಿದ್ದರು. ಆದರೆ ವಾಯುಮಾರ್ಗ ಮಧ್ಯೆ ವಿಮಾನವನ್ನು ಹಿಂದಕ್ಕೆ ಕರೆಸಿ ಇರಾನ್ ಕೊಲ್ಲಿಯಲ್ಲಿರುವ ಕಿಶ್ ದ್ವೀಪದಲ್ಲಿ ಇಳಿಸಲಾಗಿತ್ತು. ಅಲ್ಲಿ ದಯಿ ಅವರ ಪತ್ನಿ ಹಾಗೂ ಪುತ್ರಿಯನ್ನು ವಿಮಾನದಿಂದ ಕೆಳಗಿಳಿಸಲಾಯಿತೆಂದು ಸರಕಾರಿ ಸಾಮ್ಯದ ಇರ್ನಾ ಸುದ್ದಿಸಂಸ್ಥೆ ವರದಿ ಮಾಡಿದೆ.

ದಯಿ ಕುಟುಂಬಿಕರು ಇರಾನ್ನ ಇಸ್ಲಾಮಿಕ್ ಕ್ರಾಂತಿ ವಿರೋಧಿ ಗುಂಪುಗಳು ಹಾಗೂ ಗಲಭೆಕೋರರ ಜೊತೆ ನಂಟು ಹೊಂದಿರುವುದರಿಂದ ಅವರುದೇಶವನ್ನು ತೊರೆಯುವ ಮುನ್ನ ಸಂಬಂಧಪಟ್ಟ ಸಂಸ್ಥೆಗಳಗೆ ಮಾಹಿತಿ ನೀಡಬೇಕಿತ್ತು ಎಂದು ಇರ್ನಾ ಸುದ್ದಿಸಂಸ್ಥೆ ವರದಿ ಮಾಡಿದೆ.
ನನ್ನ ಪುತ್ರಿ ಹಾಗೂ ಪತ್ನಿಯನ್ನು ವಿಮಾನದಿಂದ ಇಳೞಿಸಲಾಗಿದೆ. ಆದರೆ ಅವರನ್ನು ಬಂಧಿಸಿಲ್ಲವೆಂದು ದಯಿ ಹೇಳಿರುವುದಾಗಿ ಇರ್ನಾ ವರದಿ ಮಾಡಿದೆ.
 ತನ್ನ ಕುಟುಂಬವು ಟೆಹರಾನ್ಗೆ ವಾಪಾಸಾಗುವಂತೆ ಮಾಡಲು ತಾನು ಏರ್ಪಾಡುಗಳನ್ನು ಮಾಡುವುದಾಗಿ ದಯಿ ಹೇಳಿದ್ದಾರೆ.

Similar News