ಉತ್ತರಾಖಂಡ, ನೇಪಾಳದ ನಂತರ ಅಯೋಧ್ಯೆಯಲ್ಲಿ 4.3 ತೀವ್ರತೆಯ ಭೂಕಂಪನ

Update: 2022-12-28 04:47 GMT

ಲಕ್ನೊ: ರಿಕ್ಟರ್ ಮಾಪಕದಲ್ಲಿ 4.3 ತೀವ್ರತೆ ಹೊಂದಿದ್ದ ಭೂಕಂಪವು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಇಂದು (ಬುಧವಾರ) ಮುಂಜಾನೆ 1.52 ಗಂಟೆಗೆ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪ ಶಾಸ್ತ್ರ ಕೇಂದ್ರ ತಿಳಿಸಿದೆ. ಉತ್ತರ ಭಾಗದ 28.36 ಡಿಗ್ರಿ ಅಕ್ಷಾಂಶ ಹಾಗೂ 83.22 ಡಿಗ್ರಿ ರೇಖಾಂಶದಲ್ಲಿ ಭೂಕಂಪನವಾಗಿದ್ದು, ಭೂಕಂಪವು 10 ಕಿಮೀ ಆಳದಿಂದ ದಾಖಲಾಗಿದೆ ಎಂದು ಅದು ಹೇಳಿದೆ ಎಂದು livemint.com ವರದಿ ಮಾಡಿದೆ.

ಈ ಕುರಿತು ಟ್ವೀಟ್ ಮಾಡಿರುವ ರಾಷ್ಟ್ರೀಯ ಭೂಕಂಪ ಶಾಸ್ತ್ರ ಕೇಂದ್ರವು, "ದಿನಾಂಕ 28-12-2022ರಂದು ಮುಂಜಾನೆ 1:52:02 ಗಂಟೆಯಲ್ಲಿ ಉತ್ತರ ಪ್ರದೇಶದ ಅಯೋಧ್ಯೆಯ ಉತ್ತರ ಭಾಗದಿಂದ 201 ಕಿಮೀ ದೂರದಲ್ಲಿ 10 ಕಿಮೀ ಆಳದಿಂದ 23.36 ಡಿಗ್ರಿ ಅಕ್ಷಾಂಶ ಹಾಗೂ 83.22 ಡಿಗ್ರಿ ರೇಖಾಂಶದಲ್ಲಿ ಭೂಕಂಪ ಸಂಭವಿಸಿದೆ" ಎಂದು ತಿಳಿಸಿದೆ.

ಉತ್ತರ ಪ್ರದೇಶವಲ್ಲದೆ ಉತ್ತರಾಖಂಡದ ಉತ್ತರಾಕ್ಷಿಯಲ್ಲಿ ಬುಧವಾರ ಮುಂಜಾನೆ 3.1 ತೀವ್ರತೆಯ  ಭೂಕಂಪನ ಸಂಭವಿಸಿದೆ. 

ಇದರೊಂದಿಗೆ ನೇಪಾಳದ ಬ್ಯಾಗ್ಲಂಗ್‌ ಜಿಲ್ಲೆಯಲ್ಲಿ ಬುಧವಾರ ಮುಂಜಾನೆ ಎರಡು ಬಾರಿ ಭೂಕಂಪ ಸಂಭವಿಸಿದ್ದು, ಭೂಕಂಪದ ತೀವ್ರತೆ ಕ್ರಮವಾಗಿ 4.7 ಮತ್ತು 5.3 ದಾಖಲಾಗಿದೆ ಎಂದು ನೇಪಾಳದ ರಾಷ್ಟ್ರೀಯ ಭೂಕಂಪ ಮೇಲ್ವಿಚಾರಣೆ ಮತ್ತು ಸಂಶೋಧನಾ ಕೇಂದ್ರ ವರದಿ ಮಾಡಿದೆ.

ಈ ಕೇಂದ್ರದಲ್ಲಿ ದಾಖಲಾಗಿರುವ ಮಾಪನದ ಪ್ರಕಾರ, ಬ್ಯಾಗ್ಲಂಗ್ ಜಿಲ್ಲೆಯ ಅಧಿಕಾರಿ ಚೌರ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂಜಾನೆ 1.23ರ ವೇಳೆಗೆ 4.7 ತೀವ್ರತೆಯ ಭೂಕಂಪ ಅಪ್ಪಳಿಸಿದೆ.

Similar News