ಅಮೆರಿಕ: ಹೆಪ್ಪುಗಟ್ಟಿದ ಸರೋವರದಲ್ಲಿ ಮುಳುಗಿ ಭಾರತ ಮೂಲದ ಮೂವರು ಮೃತ್ಯು

Update: 2022-12-28 07:49 GMT

ವಾಷಿಂಗ್ಟನ್: ಹೆಪ್ಪುಗಟ್ಟಿದ ಸರೋವರದ ಮೇಲೆ ನಡೆದುಕೊಂಡು ಹೋಗುತ್ತಿದ್ದಾಗ ಮಂಜುಗಡ್ಡೆ ಒಡೆದು ಸರೋವರದಲ್ಲಿ ಮುಳುಗಿ ಓರ್ವ ಮಹಿಳೆ ಸೇರಿದಂತೆ ಭಾರತ ಮೂಲದ ಮೂವರು ಸಾವಿಗೀಡಾಗಿರುವ ಘಟನೆ ಅಮೆರಿಕಾದ ಅರಿಝೋನಾ ರಾಜ್ಯದಿಂದ ವರದಿಯಾಗಿದೆ.

ಈ ಘಟನೆಯು ಅರಿಝೋನಾ ರಾಜ್ಯದಲ್ಲಿರುವ ಕ್ಯಾನ್ಯಾನ್ ಕೊಕೊನಿನೊ ಕೌಂಟಿ ಸರೋವರದಲ್ಲಿ ಡಿಸೆಂಬರ್ 26ರಂದು ಮಧ್ಯಾಹ್ನ 3.35 ಗಂಟೆಗೆ ಸಂಭವಿಸಿದೆ.

ಮಂಜುಗಡ್ಡೆಯಡಿ ಸಿಲುಕಿ ಕಾಣೆಯಾಗಿದ್ದವರ ಮೃತದೇಹಗಳನ್ನು ಪತ್ತೆ ಹಚ್ಚಲಾಗಿದ್ದು, ಅವರನ್ನು ನಾರಾಯಣ ಮುದ್ದಣ್ಣ (49), ಗೋಕುಲ್ ಮೇಡಿಸೇಟಿ (47) ಹಾಗೂ ಹರಿತಾ ಮುದ್ದಣ್ಣ (ವಯಸ್ಸು ತಿಳಿದು ಬಂದಿಲ್ಲ) ಎಂದು ಗುರುತಿಸಲಾಗಿದೆ. ಈ ಮೂವರು ಸಂತ್ರಸ್ತರು ಮೂಲತಃ ಭಾರತೀಯರಾಗಿದ್ದು, ಅರಿಝೋನಾ ರಾಜ್ಯದ ಚಾಂಡ್ಲರ್ನಲ್ಲಿ ವಾಸಿಸುತ್ತಿದ್ದರು ಎಂದು ಕೊಕೊನಿನೊ ಕೌಂಟಿ ಷರೀಫ್ ಕಚೇರಿಯು ಮಂಗಳವಾರ ಬಿಡುಗಡೆ ಮಾಡಿರುವ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಅಧಿಕಾರಿಗಳು, ಹರಿತಾರನ್ನು ಕೂಡಲೇ ನೀರಿನಿಂದ ಹೊರಗೆಳೆದು, ಜೀವರಕ್ಷಕ ಕ್ರಮಗಳನ್ನು ಅಳವಡಿಸಲಾಯಿತಾದರೂ ತಮ್ಮ ಪ್ರಯತ್ನ ವಿಫಲವಾಗಿ ಅವರು  ಘಟನಾ ಸ್ಥಳದಲ್ಲೇ  ಮೃತಪಟ್ಟರು ಎಂದು ತಿಳಿಸಿದ್ದಾರೆ.

ಸರೋವರಕ್ಕೆ ಬಿದ್ದಿದ್ದ ಮತ್ತಿಬ್ಬರಾದ ನಾರಾಯಣ ಮತ್ತು ಗೋಕುಲ್  ಮೇಡಿಸೇಟಿಯ ಪತ್ತೆಗಾಗಿ ರಕ್ಷಣಾ ತಂಡವು ಕೂಡಲೇ ಶೋಧ ಕಾರ್ಯ ಕೈಗೊಂಡಿತು. ಅವರಿಬ್ಬರು ಮಂಗಳವಾರ ಮಧ್ಯಾಹ್ನ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದರು ಎಂದು ಷರೀಫ್ ಕಚೇರಿ ತಿಳಿಸಿದೆ. 

ಎಲ್ಲ ಮೂವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.

Similar News