ಮಸ್ಕ್ ಅಮೆರಿಕ ಅಧ್ಯಕ್ಷರಾಗಲಿದ್ದಾರೆ, ಜರ್ಮನಿ-ಫ್ರಾನ್ಸ್ ನಡುವೆ ಯುದ್ಧ ನಡೆಯಲಿದೆ ಎಂದ ಪುಟಿನ್ ಆಪ್ತ

Update: 2022-12-28 09:59 GMT

ಮಾಸ್ಕೊ: ಮುಂದಿನ ವರ್ಷ ಜರ್ಮನಿ-ಫ್ರಾನ್ಸ್ ನಡುವೆ ಯುದ್ಧ ನಡೆಯಲಿದೆ ಮತ್ತು ಅಮೆರಿಕಾದಲ್ಲಿ ಆಂತರಿಕ ದಂಗೆ ನಡೆದು, ಎಲಾನ್ ಮಸ್ಕ್ (Elon Musk) ಅಧ್ಯಕ್ಷರಾಗಲಿದ್ದಾರೆ ಎಂದು ರಶ್ಯದ ಮಾಜಿ ಅಧ್ಯಕ್ಷ ಹಾಗೂ ವ್ಲಾದಿಮಿರ್‌‌ ಪುಟಿನ್ (Vladimir Putin) ಅವರ ನಿಷ್ಠ ಡಿಮಿಟ್ರಿ ಮೆಡ್ವೆಡೆವ್ (Dmitry Medvedev) ಹೇಳಿದ್ದಾರೆ ಎಂದು ndtv.com ವರದಿ ಮಾಡಿದೆ.

ಪುಟಿನ್ ಸರ್ಕಾರದಲ್ಲಿ ಭದ್ರತಾ ಸಲಹಾ ಮಂಡಳಿಯ ಉಪ ಮುಖ್ಯಸ್ಥರಾಗಿರುವ ಮೆಡ್ವೆಡೆವ್, ಪುಟಿನ್ ಈ ಹಿಂದೆ ಪ್ರಧಾನ ಮಂತ್ರಿಯಾಗಿದ್ದಾಗ ನಾಲ್ಕು ವರ್ಷದ ಅವಧಿಗೆ ರಷ್ಯಾ ಅಧ್ಯಕ್ಷರಾಗಿದ್ದರು. ಅವರೀಗ ಕ್ರೆಮ್ಲಿನ್ ಭವನದಲ್ಲಿ ತಮ್ಮ ಅದೃಷ್ಟ ಖುಲಾಯಿಸುವ ನಿರೀಕ್ಷೆಯಲ್ಲಿದ್ದು, ಸೇನಾ ಉದ್ಯಮದ ಮುಖ್ಯಸ್ಥರಾಗಿರುವ ಪುಟಿನ್‌ರ ಸಹಾಯಕರಾಗಿ ನೇಮಕಗೊಳ್ಳುವ ಸಾಧ್ಯತೆ ಇದೆ ಎಂದು ಸೋಮವಾರ ವರದಿಯಾಗಿದೆ.

ತಮ್ಮ ವೈಯಕ್ತಿಕ ಟೆಲಿಗ್ರಾಮ್ ಮತ್ತು ಟ್ವಿಟರ್ ಖಾತೆಗಳಲ್ಲಿ 2023ರ ಕುರಿತ ಭವಿಷ್ಯದ ಪಟ್ಟಿಯನ್ನು ಪ್ರಕಟಿಸಿರುವ ಅವರು, ಅದರಲ್ಲಿ ಬ್ರಿಟನ್ ಮತ್ತೆ ಯೂರೋಪ್ ಒಕ್ಕೂಟ ಸೇರ್ಪಡೆಯಾಗುವ ಸಾಧ್ಯತೆ ಇದು, ಅದರಿಂದ ಅದು ಪತನಗೊಳ್ಳಲಿದೆ ಎಂದೂ ಭವಿಷ್ಯ ನುಡಿದಿದ್ದಾರೆ.

ಟೆಸ್ಲಾ ಮಾಲಕ ಹಾಗೂ ಟ್ವಿಟರ್ ಮುಖ್ಯಸ್ಥರೂ ಆಗಿರುವ ಎಲಾನ್ ಮಸ್ಕ್, ಮೆಡ್ವೆಡೆವ್ ಅವರ ಕೆಲವು ಭವಿಷ್ಯವಾಣಿಯನ್ನು ಟೀಕಿಸಿದ್ದರೂ, ತಾನು ಅಮೆರಿಕಾದ ಅಧ್ಯಕ್ಷನಾಗಲಿದ್ದೇನೆ ಎಂಬ ಭವಿಷ್ಯವನ್ನು "ಅದ್ಭುತ ಕಥಾಹಂದರ" ಎಂದು ಹೊಗಳಿದ್ದಾರೆ. ಇದಕ್ಕೂ ಮುನ್ನ ಉಕ್ರೇನ್ ಆಕ್ರಮಿತ ಪ್ರದೇಶಗಳನ್ನು ಶಾಂತಿಯುತ ಮಾತುಕತೆ ಮೂಲಕ ರಷ್ಯಾಗೆ ಹಸ್ತಾಂತರಿಸಬೇಕು ಎಂಬ ಎಲಾನ್ ಮಸ್ಕ್ ಪ್ರತಿಪಾದನೆಯನ್ನು ಮೆಡ್ವೆಡೆವ್ ಶ್ಲಾಘಿಸಿದ್ದರು.

ಈ ಕುರಿತು ಪ್ರತಿಕ್ರಿಯಿಸಿರುವ ರಾಜಕೀಯ ವಿಜ್ಞಾನಿ ವ್ಲಾದಿಮಿರ್ ಪಸ್ತುಖೋವ್, ಮೆಡ್ವೆಡೆವ್‌ರ ಇತ್ತೀಚಿನ ಸಾರ್ವಜನಿಕ ವಾಚಾಳಿ ವ್ಯಕ್ತಿತ್ವವು ತಮ್ಮ ನಾಯಕನನ್ನು ಮೆಚ್ಚಿಸುವ ಸಲುವಾಗಿ ಇರುವಂತೆ ಕಾಣುತ್ತಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

Similar News