ಎರಡು ದಿನಗಳಲ್ಲಿ ದೇಶದ ವಿಮಾನ ನಿಲ್ದಾಣಗಳಲ್ಲಿ 39 ಅಂತರರಾಷ್ಟ್ರೀಯ ಪ್ರವಾಸಿಗಳಲ್ಲಿ ಕೋವಿಡ್ ಪತ್ತೆ

Update: 2022-12-28 15:25 GMT

ಹೊಸದಿಲ್ಲಿ, ಡಿ.28: ಕಳೆದ ಎರಡು ದಿನಗಳಲ್ಲಿ ದೇಶಾದ್ಯಂತದ ವಿಮಾನ ನಿಲ್ದಾಣಗಳಲ್ಲಿ ವಿದೇಶಗಳಿಂದ ಭಾರತಕ್ಕೆ ಆಗಮಿಸಿದ 39 ಜನರಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಗುರುವಾರ ದಿಲ್ಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಲಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.

ಕೋವಿಡ್ ಉಲ್ಬಣಿಸುತ್ತಿರುವ ಹಿನ್ನೆಲೆಯಲ್ಲಿ ಹೊಸದಾಗಿ ಹೊರಡಿಸಲಾಗಿರುವ ಶಿಷ್ಟಾಚಾರಗಳಡಿ ಒಟ್ಟು 6,000 ಪ್ರಯಾಣಿಕರನ್ನು ಯಾದ್ರಚ್ಛಿಕವಾಗಿ ಪರೀಕ್ಷೆಗೊಳಪಡಿಸಲಾಗಿದೆ. ವಿದೇಶಗಳಿಂದ ಆಗಮಿಸುವ ಪ್ರಯಾಣಿಕರಲ್ಲಿ ಶೇ.2ರಷ್ಟು ಜನರನ್ನು ಯಾದ್ರಚ್ಛಿಕವಾಗಿ ಆಯ್ದುಕೊಂಡು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಸರಕಾರವು ಹೇಳಿತ್ತು.

ದೇಶದಲ್ಲಿ ಈವರೆಗೆ ಕೋವಿಡ್ ವೈರಸ್ನ 200 ತಳಿಗಳನ್ನು ಪತ್ತೆ ಹಚ್ಚಲಾಗಿದೆ. ಚೀನಾದಲ್ಲಿ ಹಾವಳಿಯನ್ನುಂಟು ಮಾಡಿರುವ ನಾಲ್ಕು ಪ್ರಭೇದಗಳ ಪೈಕಿ ಒಂದಾಗಿರುವ ಬಿಎಫ್ 7 ತಳಿಯನ್ನೂ ಪ್ರತ್ಯೇಕಿಸಲಾಗಿದೆ. ದೇಶದಲ್ಲಿ ಬಳಕೆಯಾಗುತ್ತಿರುವ ಲಸಿಕೆಗಳು ಈ ತಳಿಯ ವಿರುದ್ಧ ಪರಿಣಾಮಕಾರಿಯಾಗಿರುವುದು ಕಂಡುಬಂದಿದೆ ಎಂದು ಮೂಲಗಳು ತಿಳಿಸಿದವು.

ಚೀನಾದಲ್ಲಿ ಕೊರೋನ ಉಲ್ಬಣಕ್ಕೆ ನಾಲ್ಕು ಪ್ರಭೇದಗಳು ಕಾರಣವಾಗಿವೆ. ಈ ಪೈಕಿ ಬಿಎಫ್ 7 ಕೇವಲ ಶೇ.15ರಷ್ಟು,ಬಿಎನ್ ಮತ್ತು ಬಿಕ್ಯೂ ಸರಣಿಗಳ ಪ್ರಭೇದಗಳು ಶೇ.50ರಷ್ಟು ಪ್ರಕರಣಗಳಿಗೆ ಕಾರಣವಾಗಿವೆ. ಎಸ್ವಿವಿ ಪ್ರಭೇದವು ಶೇ.10-15 ಪ್ರಕರಣಗಳಿಗೆ ಕಾರಣವಾಗಿದೆ. ಈ ವೈರಸ್ಗಳ ಮಿಶ್ರಣವು ಸ್ಥಳೀಯ ಸಾಂಕ್ರಾಮಿಕ ರೋಗಶಾಸ್ತ್ರದಿಂದಾಗಿ ಭಿನ್ನವಾಗಿ ವರ್ತಿಸುತ್ತದೆ ಎಂದು ಹೇಳಿದ ನ್ಯಾಷನಲ್ ಟೆಕ್ನಿಕಲ್ ಅಡ್ವೈಸರಿ ಗ್ರೂಪ್ ಆನ್ ಇಮ್ಯುನೈಸೇಷನ್ (ಎನ್ಟಿಎಜಿಐ)ನ ಕೋವಿಡ್ ಕಾರ್ಯಪಡೆಯ ಅಧ್ಯಕ್ಷ ಡಾ.ಎನ್.ಕೆ.ಅರೋರಾ ಸುದ್ದಿಸಂಸ್ಥೆಗೆ ತಿಳಿಸಿದರು.

ಲಸಿಕೆಗಳು ಮತ್ತು ಮೊದಲ,ಎರಡನೇ ಮತ್ತು ಮೂರನೇ ಅಲೆಗಳ ಮೂಲಕ ನೈಸರ್ಗಿಕ ಸೋಂಕಿನ ಮೂಲಕ ಗಳಿಸಿಕೊಂಡಿರುವ ಪ್ರತಿರೋಧಕತೆಯ ಸಂಯೋಜನೆ ‘ಹೈಬ್ರಿಡ್ ಇಮ್ಯುನಿಟಿ ’ಯು ಭಾರತಕ್ಕೆ ಲಾಭದಾಯಕವಾಗಿದೆ ಎಂದು ಹೇಳಿದ ಅವರು, ಚೀನಾದಲ್ಲಿ ಅವರು ಹಿಂದೆ ವೈರಸ್ಗೆ ಒಡ್ಡಿಕೊಂಡಿರಲಿಲ್ಲ. ಮೂರರಿಂದ ನಾಲ್ಕು ಡೋಸ್ಗಳ ಹೊರತಾಗಿಯೂ ಅವರು ಪಡೆದಿರುವ ಲಸಿಕೆಯು ಬಹುಶಃ ಕಡಿಮೆ ಪರಿಣಾಮಕಾರಿಯಾಗಿದೆ ಎಂದರು.

Similar News