ಜಪಾನ್, ತೈವಾನ್ ನಲ್ಲಿ ಕೋವಿಡ್ ಉಲ್ಬಣ: ಕಠಿಣ ನಿಯಮ ಜಾರಿ

Update: 2022-12-28 15:59 GMT

ಟೋಕಿಯೊ, ಡಿ.28: ಬುಧವಾರ ಜಪಾನ್ನಲ್ಲಿ ಕೋವಿಡ್ ಸೋಂಕಿನಿಂದಾಗಿ ಒಂದೇ ದಿನ 415 ಮಂದಿ ಮೃತಪಟ್ಟಿದ್ದು ಇದು ಹೊಸ ದಾಖಲೆಯಾಗಿದೆ. ಬುಧವಾರದ ಅಂಕಿಅಂಶದ ಪ್ರಕಾರ ದೇಶದಲ್ಲಿ 2,16,219 ಹೊಸ ಸೋಂಕು ಪ್ರಕರಣ ವರದಿಯಾಗಿದ್ದು ಕಳೆದ ವಾರಕ್ಕೆ ಹೋಲಿಸಿದರೆ ಇದು 4%ದಷ್ಟು ಏರಿಕೆಯಾಗಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಕಳೆದ 7 ದಿನಗಳಲ್ಲಿ ಜಪಾನ್ ವಿಶ್ವದಲ್ಲೇ ಅತ್ಯಧಿಕ ದೃಢಪಡಿಸಿದ ಕೋವಿಡ್ ಸೋಂಕನ್ನು ಹೊಂದಿದೆ ಮತ್ತು ಅಮೆರಿಕದ ನಂತರ ಎರಡನೇ ಅತೀ ಹೆಚ್ಚು ಸಾವಿನ ಪ್ರಕರಣ ಜಪಾನ್ನಲ್ಲಿ ದಾಖಲಾಗಿದೆ. ಈ ಮಧ್ಯೆ ತೈವಾನ್ನಲ್ಲೂ ಕೋವಿಡ್ ಸೋಂಕು ಪ್ರಕರಣ ಉಲ್ಬಣಿರುವ ಹಿನ್ನೆಲೆಯಲ್ಲಿ ಅಲ್ಲಿ ಕೆಲವೊಂದು ಕಠಿಣ ನಿಯಮ ಜಾರಿಗೆ ಬಂದಿದೆ. ಜನವರಿ 1ರಿಂದ ಚೀನಾದಿಂದ ಆಗಮಿಸುವವರು ಕೋವಿಡ್ ಸೋಂಕು ಪರೀಕ್ಷೆಗೆ ಒಳಗಾಗುವುದನ್ನು ಕಡ್ಡಾಯಗೊಳಿಸಲಾಗಿದೆ.

ಚೀನಾದಲ್ಲಿ ಕೋವಿಡ್ ಸೋಂಕು ಉಲ್ಬಣಿಸಿದ್ದರೂ, ಕೆಲವು ನಿಯಮಗಳನ್ನು ಸಡಿಲಿಸಲು ನಿರ್ಧರಿಸಲಾಗಿದೆ. ಮುಂದಿನ ತಿಂಗಳ ಹೊಸ ವರ್ಷದ ರಜೆ ಸಂದರ್ಭ ಪ್ರವಾಸಿಗರಿಗೆ ಸಾಮಾನ್ಯ ವೀಸಾ ಮತ್ತು ದೇಶದ ಜನತೆಗೆ ಪಾಸ್ಪೋರ್ಟ್ ಒದಗಿಸಲು ನಿರ್ಧರಿಸಲಾಗಿದೆ.ವಿದೇಶಕ್ಕೆ ತೆರಳಲು ಬಯಸುವವರ ಅರ್ಜಿಗಳನ್ನು ಜನವರಿ 8ರಿಂದ ಸ್ವೀಕರಿಸಲಾಗುವುದು ಎಂದು ಚೀನಾದ ರಾಷ್ಟ್ರೀಯ ವಲಸೆ ಆಯೋಗ ಹೇಳಿದೆ. ಹಾಂಕಾಂಗ್ನಲ್ಲೂ ಪ್ರಮುಖ ಕೋವಿಡ್ ನಿರ್ಬಂಧ ಕ್ರಮಗಳನ್ನು ಅಂತ್ಯಗೊಳಿಸಲಾಗಿದ್ದು ಕೆಲವು ಪ್ರದೇಶಗಳಿಗೆ ಭೇಟಿ ನೀಡಬೇಕಿದ್ದರೆ ಲಸಿಕೆ ಪ್ರಮಾಣಪತ್ರ ಕಡ್ಡಾಯಗೊಳಿಸಿರುವ ನಿಯಮವನ್ನು ರದ್ದುಗೊಳಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Similar News