ತೈವಾನ್ ನ ಕಡ್ಡಾಯ ಮಿಲಿಟರಿ ಸೇವೆ ವಿಸ್ತರಣೆ ನಿರ್ಧಾರಕ್ಕೆ ಚೀನಾ ಖಂಡನೆ

Update: 2022-12-28 15:58 GMT

ಬೀಜಿಂಗ್, ಡಿ.28: ಕಡ್ಡಾಯ ಮಿಲಿಟರಿ ಸೇವೆ ವಿಸ್ತರಿಸುವ ತೈವಾನ್ನ ನಿರ್ಧಾರವು ಜನರನ್ನು ‘ಫಿರಂಗಿಗೆ ಮೇವು’ ಆಗಿ ಬಳಸುವ ಉದ್ದೇಶ ಹೊಂದಿದೆ ಎಂದು ಚೀನಾ ಬುಧವಾರ ಖಂಡಿಸಿದೆ.‘ಚೀನಾದಿಂದ ಹೆಚ್ಚುತ್ತಿರುವ ಮಿಲಿಟರಿ ಬೆದರಿಕೆಯನ್ನು ಎದುರಿಸಲು ಸನ್ನದ್ಧರಾಗುವ ಅಗತ್ಯವಿದ್ದು ನಾಗರಿಕರಿಗೆ 4 ತಿಂಗಳ ಕಡ್ಡಾಯ ಮಿಲಿಟರಿ ಸೇವೆಯನ್ನು 1 ವರ್ಷಕ್ಕೆ ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ತೈವಾನ್ ಅಧ್ಯಕ್ಷೆ ತ್ಸಾಯಿ ಇಂಗ್-ವೆನ್ ಮಂಗಳವಾರ ಹೇಳಿದ್ದರು.

ಪ್ರಜಾಪ್ರಭುತ್ವದ ಆಡಳಿತವಿರುವ ತೈವಾನ್ ತನ್ನ ಭೂವ್ಯಾಪ್ತಿಗೆ ಸೇರಿದೆ ಎಂದು ಚೀನಾ ಪ್ರತಿಪಾದಿಸುತ್ತಿದೆ. ಕಡ್ಡಾಯ ಮಿಲಿಟರಿ ಸೇವೆಯನ್ನು ವಿಸ್ತರಿಸುವ ಕುರಿತ ಪ್ರಶ್ನೆಗೆ ಉತ್ತರಿಸಿದ ಚೀನಾ ವಿದೇಶಾಂಗ ಇಲಾಖೆಯ ವಕ್ತಾರ ವಾಂಗ್ ವೆನ್ಬಿನ್ ‘ರಾಷ್ಟ್ರೀಯ ಪುನರೇಕೀಕರಣವನ್ನು ಸಾಧಿಸುವ ಮಹತ್ತರವಾದ ಕಾರ್ಯಕ್ಕಾಗಿ ಹೋರಾಡುವುದು ಅಳೆಯಲಾಗದಷ್ಟು ಮಹತ್ವದ್ದಾಗಿದೆ, ತೈವಾನ್ ಸ್ವಾತಂತ್ರ್ಯಕ್ಕಾಗಿ ಸಾಯುವ ಪ್ರತ್ಯೇಕತಾವಾದಿ ಚಟುವಟಿಕೆಗಳು ಸಂಪೂರ್ಣ ನಿಷ್ಪ್ರಯೋಜಕವಾಗಿದೆ. ತೈವಾನ್ ದೇಶಬಾಂಧವರು ವಾಸ್ತವವಾದಿಗಳು ಮತ್ತು ತೈವಾನ್ನ ಸ್ವಾತಂತ್ರ್ಯ ಬಯಸುವ ಪ್ರತ್ಯೇಕತಾವಾದಿಗಳ ಫಿರಂಗಿಗಳಿಗೆ ಮೇವು ಆಗಲಾರರು ಎಂಬ ವಿಶ್ವಾಸ ನಮಗಿದೆ’ ಎಂದಿದ್ದಾರೆ.

Similar News