ಹತಾಶ ರಶ್ಯದಿಂದ ಪರಮಾಣು ದಾಳಿಯ ಸಾಧ್ಯತೆ: ನೇಟೊ ಆತಂಕ‌

Update: 2022-12-28 16:26 GMT

 ಪ್ಯಾರಿಸ್, ಡಿ.28: ಉಕ್ರೇನ್ ವಿರುದ್ಧದ ಯುದ್ಧದಲ್ಲಿ ನಿರೀಕ್ಷಿತ ಮುನ್ನಡೆ ಸಾಧ್ಯವಾಗದಿರುವ ಹತಾಶೆಯಲ್ಲಿ ರಶ್ಯ ಪರಮಾಣು ದಾಳಿ ನಡೆಸುವ ಸಾಧ್ಯತೆ ಈಗ ಈ ಹಿಂದೆಂದಿಗಿಂತಲೂ ಹೆಚ್ಚಿದೆ. ದಶಕಗಳಿಂದ ಸಾರ್ವಜನಿಕ ಪ್ರಜ್ಞೆಯಿಂದ ದೂರವಿದ್ದ ಪರಮಾಣು ಯುದ್ಧದ ದುಃಸ್ವಪ್ನವು ಉಕ್ರೇನ್ ಮೇಲಿನ ರಶ್ಯದ ಆಕ್ರಮಣದಿಂದ ಮತ್ತೆ ಪ್ರಾಮುಖ್ಯತೆ ಪಡೆದಿದೆ.ಶೀತಲ ಸಮರದ ಯುಗ ಮತ್ತೆ ಆರಂಭವಾಗುವ ಸೂಚನೆ ಇದೆ ಎಂದು ನೇಟೊದ ಮಾಜಿ ಉಪಪ್ರಧಾನ ಕಾರ್ಯದರ್ಶಿ ಕ್ಯಾಮಿಲ್ಲೆ ಗ್ರಾಂಡ್ ಪ್ರತಿಪಾದಿಸಿದ್ದಾರೆ.

ವಿಶ್ವಸಂಸ್ಥೆ ಭದ್ರತಾ ಮಂಡಳಿಯ 5 ಕಾಯಂ ಸದಸ್ಯರಾದ ರಶ್ಯ, ಬ್ರಿಟನ್, ಚೀನಾ, ಫ್ರಾನ್ಸ್ ಮತ್ತು ಅಮೆರಿಕ ಐದು ಮಾನ್ಯತೆ ಪಡೆದ ಪರಮಾಣು ಶಕ್ತ ದೇಶಗಳಾಗಿವೆ. ಪರಮಾಣು ಶಸ್ತ್ರಾಸ್ತ್ರಗಳ ನೆರಳಿನ ಅಡಿಯಲ್ಲಿ ಸಾಂಪ್ರದಾಯಿಕ ಯುದ್ಧವನ್ನು ನಡೆಸಲು ಪರಮಾಣು ಶಕ್ತ ದೇಶವೊಂದು ತನ್ನ ಸ್ಥಾನಮಾನ(ವಿಶ್ವಸಂಸ್ಥೆ ಭದ್ರತಾ ಮಂಡಳಿ ಸದಸ್ಯತ್ವ)ವನ್ನು ಬಳಸಿಕೊಂಡಿರುವುದು ಇದೇ ಮೊದಲು. ಪುಂಡ ರಾಷ್ಟ್ರಗಳ ಇಂತಹ ವರ್ತನೆ ನಿರೀಕ್ಷಿತ. ಆದರೆ ಹಠಾತ್ತಾಗಿ ಎರಡು ಪ್ರಮುಖ ಪರಮಾಣು ದೇಶಗಳು, ಅದರಲ್ಲಿ ಒಂದು ಭದ್ರತಾ ಮಂಡಳಿಯ ಸದಸ್ಯದೇಶ, ಈ ಬೆದರಿಕೆ ಒಡ್ಡಿರುವುದು ಅನಿರೀಕ್ಷಿತ ವಿದ್ಯಮಾನ ಎಂದು ಕ್ಯಾಮಿಲ್ಲೆ ಗ್ರಾಂಡ್ ಹೇಳಿದ್ದಾರೆ.

ಉಕ್ರೇನ್ ಯುದ್ಧ ಆರಂಭವಾದಂದಿನಿಂದಲೂ ರಶ್ಯದ ಟಿವಿ ವಾಹಿನಿಗಳು ನಿರಂತರವಾಗಿ ಪ್ಯಾರಿಸ್ ಮತ್ತು ನ್ಯೂಯಾರ್ಕ್ನಂತಹ ಪಾಶ್ಚಿಮಾತ್ಯ ನಗರಗಳ ಮೇಲಿನ ಪರಮಾಣು ದಾಳಿಯ ಬಗ್ಗೆ ಚರ್ಚೆ ನಡೆಸುತ್ತಿವೆ. ರಶ್ಯದ ಅಸ್ತಿತ್ವಕ್ಕೆ ಸಂಚಕಾರ ಬಂದಿದೆ ಎಂದು ಅಧ್ಯಕ್ಷ ಪುಟಿನ್ ಭಾವಿಸಿದರೆ ಅವರು ಪರಮಾಣು ಅಸ್ತ್ರದ ಗುಂಡಿಯನ್ನು ಒತ್ತಲು ಹಿಂಜರಿಯರು ಎಂದು ರಶ್ಯದ ಹಿರಿಯ ರಾಜತಾಂತ್ರಿಕರೊಬ್ಬರು ಹೇಳಿದ್ದಾರೆ.
 ಆಗಸ್ಟ್ನಲ್ಲಿ ವಿಶ್ವಸಂಸ್ಥೆಯ ಆಶ್ರಯದಲ್ಲಿ ನಡೆದಿದ್ದ ಪರಮಾಣು ಶಸ್ತ್ರಾಸ್ತ್ರಗಳ ಪ್ರಸರಣ ತಡೆ ಒಪ್ಪಂದ(ಎನ್ಪಿಟಿ) ಕುರಿತ ಸಮಾವೇಶದ ಅಂತ್ಯದಲ್ಲಿ ಕೈಗೊಂಡ ನಿರ್ಣಯಕ್ಕೆ 191 ದೇಶಗಳು ಸಹಿ ಹಾಕಿದ್ದವು. ಆದರೆ ಅಂತಿಮ ಕ್ಷಣದಲ್ಲಿ ಇದನ್ನು ರಶ್ಯ ವೀಟೊ ಬಳಸಿ ತಡೆದಿದೆ.
ಈ ಹಿಂದೆ ಎನ್ಪಿಟಿಯ ಪ್ರಬಲ ಬೆಂಬಲಿಗನಾಗಿದ್ದ ರಶ್ಯ ಯೂ-ಟರ್ನ್ ಹೊಡೆದಿರುವುದು ಪ್ರಮುಖ ಬೆಳವಣಿಗೆಯಾಗಿದೆ. ಇದು ಒಪ್ಪಂದವನ್ನು ತಿರಸ್ಕರಿಸಿದಂತಾಗಿದೆ ಎಂದು ಫ್ರಾನ್ಸ್ ಖಂಡಿಸಿದೆ.

Similar News