​ಪಾಕಿಸ್ತಾನ: ಸಂತ್ರಸ್ತೆಯನ್ನು ಮದುವೆಯಾಗಲು ಒಪ್ಪಿದ ಅತ್ಯಾಚಾರ ಆರೋಪಿಯ ಖುಲಾಸೆ

Update: 2022-12-28 18:02 GMT

ಇಸ್ಲಮಾಬಾದ್, ಡಿ.28: ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆಯನ್ನು ಮದುವೆಯಾಗಲು ಸಮ್ಮತಿಸಿದ ಆರೋಪಿಯನ್ನು ಖುಲಾಸೆಗೊಳಿಸಿದ ಪ್ರಕರಣ ಪಾಕಿಸ್ತಾನದಲ್ಲಿ ವರದಿಯಾಗಿದೆ.

ಶ್ರವಣದೋಷ ಇರುವ ಮಹಿಳೆಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ದವ್ಲತ್ ಖಾನ್ ಎಂಬ ವ್ಯಕ್ತಿಗೆ ಖೈಬರ್ ಪಖ್ತೂಂಖ್ವಾ ಪ್ರಾಂತದ ಬುನೆರ್ ಜಿಲ್ಲಾ ನ್ಯಾಯಾಲಯ ಮೇ ತಿಂಗಳಿನಲ್ಲಿ ಜೀವಾವಧಿ ಶಿಕ್ಷೆ ವಿಧಿಸಿತ್ತು. ಈ ಮಧ್ಯೆ, ಖಾನ್ ಕುಟುಂಬದವರು ಹಾಗೂ ಸಂತ್ರಸ್ತ ಮಹಿಳೆಯ ಕುಟುಂಬದವರು ನ್ಯಾಯಾಲಯದ ಹೊರಗೆ ನಡೆಸಿದ ಸಂಧಾನ ಮಾತುಕತೆಯಂತೆ, ಖಾನ್ ಸಂತ್ರಸ್ತ ಮಹಿಳೆಯನ್ನು ಮದುವೆಯಾಗಿ ಒಪ್ಪಿದ್ದಾನೆ.
ಎರಡೂ ಕಡೆಯವರು ಈ ಬಗ್ಗೆ ಪೇಷಾವರ ಹೈಕೋರ್ಟ್ಗೆ ಲಿಖಿತ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಹೈಕೋರ್ಟ್ ದವ್ಲತ್ ಖಾನ್ನನ್ನು ಖುಲಾಸೆಗೊಳಿಸಿದ್ದು ಆತ ಜೈಲಿನಿಂದ ಬಿಡುಗಡೆಯಾಗಿದ್ದಾನೆ ಎಂದು ವರದಿಯಾಗಿದೆ. ಆದರೆ ಹೈಕೋರ್ಟ್ ತೀರ್ಪಿನ ಬಗ್ಗೆ ಮಾನವ ಹಕ್ಕು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದು, ಈ ತೀರ್ಪು ಮಹಿಳೆಯರ ವಿರುದ್ಧದ ಲೈಂಗಿಕ ಹಿಂಸಾಚಾರವನ್ನು ಕಾನೂನುಬದ್ಧಗೊಳಿಸಿದಂತಾಗಿದೆ ಎಂದು ಖಂಡಿಸಿದ್ದಾರೆ.

Similar News