×
Ad

ಉಝ್ಭೇಕಿಸ್ತಾನ: ಕೆಮ್ಮಿನ ಔಷಧ ಸೇವಿಸಿ ಮಕ್ಕಳ ಸಾವು ಪ್ರಕರಣ ತನಿಖೆ ನಡೆಸಲು ಕೇಂದ್ರ ಆರೋಗ್ಯ ಸಚಿವ ನಿರ್ದೇಶ

Update: 2022-12-29 20:27 IST

ಹೊಸದಿಲ್ಲಿ, ಡಿ. 29: ಉಝ್ಬೇಕಿಸ್ಥಾನದಲ್ಲಿ ಭಾರತ ಉತ್ಪಾದಿಸಿದ ಕೆಮ್ಮಿನ ಔಷಧ ಸೇವಿಸಿ 18 ಮಕ್ಕಳು ಸಾವನ್ನಪ್ಪಿರುವುದಕ್ಕೆ ಸಂಬಂಧಿಸಿ ತನಿಖೆ ಆರಂಭಿಸುವಂತೆ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಅವರು ಗುರುವಾರ ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (CDSCO)ಗೆ ನಿರ್ದೇಶಿಸಿದ್ದಾರೆ.

ಉತ್ಪಾದನಾ ಘಟಕದಿಂದ ಕೆಮ್ಮಿನ ಔಷಧದ ಮಾದರಿಯನ್ನು ಸಂಗ್ರಹಿಸಲಾಗಿದೆ ಹಾಗೂ ಚಂಡಿಗಢದಲ್ಲಿರುವ ಪ್ರಾದೇಶಿಕ ಔಷಧ ಪರೀಕ್ಷಾ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ ಎಂದು ಸಚಿವರು ತಿಳಿಸಿದರು. ಕೆಮ್ಮಿನ ಔಷಧ ಡೋಕ್- 1 ಮ್ಯಾಕ್ಸ್ ಅನ್ನು ನೋಯ್ಡ್ ಮೂಲದ ಔಷಧ ಕಂಪೆನಿ ಮರಿಯೋನ್ ಬಯೋಟೆಕ್ ಉತ್ಪಾದಿಸಿದೆ. ಕೆಮ್ಮಿನ ಔಷಧ, ಮಾತ್ರೆಗಳನ್ನು ಉತ್ಪಾದಿಸಲು ಹಾಗೂ ಅದನ್ನು ಉಝ್ಬೇಕಿಸ್ಥಾನಕ್ಕೆ ರಫ್ತು ಮಾಡುವ ಪರವಾನಿಗೆಯನ್ನು ಈ ಕಂಪೆನಿ ಪಡೆದುಕೊಂಡಿದೆ.

ದೇಶದಲ್ಲಿ ಮರಿಯೋನ್ ಬಯೋಟೆಕ್ ಉತ್ಪಾದಿಸಿದ ಡೋಕ್-1 ಮ್ಯಾಕ್ಸ್ ಕೆಮ್ಮಿನ ಔಷಧ ಸೇವಿಸಿದ ಬಳಿಕ ಕನಿಷ್ಠ 18 ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಉಝ್ಭೇಕಿಸ್ತಾನದ ಆರೋಗ್ಯ ಸಚಿವ ಬುಧವಾರ ಪ್ರತಿಪಾದಿಸಿದ್ದರು. ‘‘ಉತ್ತರಪ್ರದೇಶ ನೋಯ್ಡಾದ ಮರಿಯೋನ್ ಬಯೋಟೆಕ್ ಕಂಪೆನಿ ಉತ್ಪಾದಿಸಿದ ಕಲುಷಿತ ಕೆಮ್ಮಿನ ಔಷಧದ ಕುರಿತ ವರದಿಗೆ ಸಂಬಂಧಿಸಿ ಸಿಡಿಎಸ್ಸಿಒ ಉಝ್ಬೇಕಿಸ್ಥಾನ ರಾಷ್ಟ್ರೀಯ ಔಷಧ ನಿಯಂತ್ರಣ ಸಂಸ್ಥೆಯೊಂದಿಗೆ ಡಿಸೆಂಬರ್ 27ರಿಂದ ನಿರಂತರ ಸಂಪರ್ಕ ಇರಿಸಿಕೊಂಡಿದೆ’’ ಎಂದು ಮಾಂಡವೀಯ ಅವರು ಟ್ವಿಟರ್ನಲ್ಲಿ ಅಪ್ಲೋಡ್ ಮಾಡಿದ ಪೋಸ್ಟ್ನಲ್ಲಿ ತಿಳಿಸಿದ್ದಾರೆ.

‘‘ಮಾಹಿತಿ ದೊರಕಿದ ಕೂಡಲೇ, ಉತ್ತರಪ್ರದೇಶದ ಔಷಧ ನಿಯಂತ್ರಣ ಸಂಸ್ಥೆ ಹಾಗೂ ಸಿಡಿಎಸ್ಸಿಒ ತಂಡ ನೋಯ್ಡೆದ ಮರಿಯೋನ್ ಬಯೋಟೆಕ್ ನಲ್ಲಿ  ಜಂಟಿ ತಪಾಸಣೆ ನಡೆಸಿದೆ. ತಪಾಸಣಾ ವರದಿಯ ಆಧಾರದಲ್ಲಿ ಮುಂದಿನ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು’’ ಮಾಂಡವೀಯ ಹೇಳಿದರು. ಭಾರತದ ಮೈಡನ್ ಫಾರ್ಮಾಸ್ಯೂಟಿಕಲ್ ಲಿಮಿಟೆಡ್ ಉತ್ಪಾದಿಸಿದ ಕೆಮ್ಮಿನ ಔಷಧ ಸೇವಿಸಿ ಗಾಂಬಿಯಾದ 66 ಮಕ್ಕಳು ಸಾವನ್ನಪ್ಪಿದ ಪ್ರಕರಣದ ಬೆನ್ನಲ್ಲೇ ಈ ಪ್ರಕರಣ ನಡೆದಿದೆ.

Similar News