ಕಂಬೋಡಿಯಾ: ಕ್ಯಾಸಿನೋದಲ್ಲಿ ಬೆಂಕಿ ದುರಂತ; 19 ಮಂದಿ ಮೃತ್ಯು
Update: 2022-12-29 23:38 IST
ಪೋಯ್ಪೆಟ್, ಡಿ.29: ಕಂಬೋಡಿಯಾ-ಥೈಲ್ಯಾಂಡ್ ನ ಗಡಿಭಾಗದಲ್ಲಿರುವ ಕ್ಯಾಸಿನೊ(ಮೋಜು ಮಂದಿರ)ದಲ್ಲಿ ನಡೆದ ಬೆಂಕಿ ದುರಂತದಲ್ಲಿ ಕನಿಷ್ಟ 19 ಮಂದಿ ಮೃತಪಟ್ಟಿದ್ದು 50ಕ್ಕೂ ಅಧಿಕ ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಥೈಲ್ಯಾಂಡ್ ಗಡಿಭಾಗದಲ್ಲಿರುವ ಗ್ರಾಂಡ್ ಡೈಮಂಡ್ ಸಿಟಿ ಹೋಟೆಲ್-ಕ್ಯಾಸಿನೋದಲ್ಲಿ ಬುಧವಾರ ತಡರಾತ್ರಿ ಕಾಣಿಸಿಕೊಂಡ ಬೆಂಕಿಯ ಜ್ವಾಲೆಯಿಂದ ತಪ್ಪಿಸಿಕೊಳ್ಳುವ ಹತಾಶ ಪ್ರಯತ್ನದಲ್ಲಿ ಬಲಿಪಶುಗಳು ಕ್ಯಾಸಿನೋದ ಕಿಟಕಿಯಿಂದ ಕೆಳಗೆ ಹಾರಿದ್ದರು.
ಕೆಲವರು ಕ್ಯಾಸಿನೋದ ಚಾವಣಿ ಮೇಲೇರುವ ಪ್ರಯತ್ನದಲ್ಲಿ ಜಾರಿ ಬಿದ್ದಿದ್ದಾರೆ. ಪ್ರಥಮ ಮಹಡಿಯಲ್ಲಿ ಕಾಣಿಸಿಕೊಂಡ ಬೆಂಕಿ ಕ್ಷಿಪ್ರವಾಗಿ ಹರಡಿದೆ. 19 ಮಂದಿ ಮೃತಪಟ್ಟಿರುವುದು ದೃಢಪಟ್ಟಿದ್ದು ಕಟ್ಟಡದ ಕೆಲವು ಭಾಗಗಳಲ್ಲಿ ಇನ್ನೂ ಶೋಧ ನಡೆಸಿಲ್ಲದ ಕಾರಣ ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆಯಿದೆ ಎಂದು ಕಂಬೋಡಿಯಾದ ಮಾಹಿತಿ ಇಲಾಖೆಯ ನಿರ್ದೇಶಕ ಸೆಕ್ ಸೊಖೊಮ್ ಹೇಳಿದ್ದಾರೆ.