ಗ್ರೆಟಾ ಥನ್ಬರ್ಗ್‌ರೊಂದಿಗಿನ ವಾಗ್ಯುದ್ಧದ ಬಳಿಕ ಖ್ಯಾತ ಕಿಕ್‌ ಬಾಕ್ಸರ್‌ ಆಂಡ್ರ್ಯೂ ಟೇಟ್‌ ಬಂಧಿಸಿದ ಪೊಲೀಸರು

ಬಂಧನಕ್ಕೆ ಸುಳಿವು ನೀಡಿದ ಫಿಝ್ಝಾ!

Update: 2022-12-30 11:46 GMT

ಬುಚರೆಸ್ಟ್: ಮಾನವ ಕಳ್ಳಸಾಗಣೆ, ಅತ್ಯಾಚಾರ ಮತ್ತು ಸಂಘಟಿತ ಅಪರಾಧಗಳ ಗುಂಪು ಕಟ್ಟಿದ್ದಾರೆಂಬ ಶಂಕೆಯಿಂದ ಸಾಮಾಜಿಕ ಜಾಲತಾಣದಲ್ಲಿ ವಿವಾದಕ್ಕೆ  ಬಳಕೆದಾರ ಆ್ಯಂಡ್ರ್ಯೂ ಟೇಟ್ ಮತ್ತು ಆತನ ಸಹೋದರನನ್ನು ರೊಮಾನಿಯ ಪೊಲೀಸರು ಬಂಧಿಸಿದ್ದಾರೆ. ಪರಿಸರ ಕಾರ್ಯಕರ್ತೆ ಗ್ರೇಟಾ ಥನ್‌ಬರ್ಗ್‌ರೊಂದಿಗೆ ಟ್ವಿಟರ್‌ನಲ್ಲಿ ಆತ ನಡೆಸಿರುವ ಸಂವಾದ ಮತ್ತು ಆತನ ವ್ಯಂಗ್ಯಕ್ಕೆ ಗ್ರೇಟಾ ಥನ್‌ಬರ್ಗ್ ನೀಡಿರುವ ತೀಕ್ಷ್ಣ ಪ್ರತಿಕ್ರಿಯೆಯನ್ನು ಆಧರಿಸಿ ಮಾಜಿ ಕಿಕ್ ಬಾಕ್ಸರ್ ಆ್ಯಂಡ್ರ್ಯೂ ಟೇಟ್‌ನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬುಧವಾರ ಗ್ರೇಟಾ ಥನ್‌ಬರ್ಗ್‌ರೊಂದಿಗೆ ಟ್ವಿಟರ್‌ನಲ್ಲಿ ಸಂವಾದಿಸಿದ್ದ ಬ್ರಿಟಿಷ್‌ ಪ್ರಜೆ ಆ್ಯಂಡ್ರ್ಯೂ ಟೇಟ್, ನನ್ನ ಬಳಿ ದೊಡ್ಡ ಪ್ರಮಾಣದಲ್ಲಿ ಹೊಗೆ ಸೂಸುವ 33 ಕಾರುಗಳಿವೆ ಎಂದು ಹೇಳಿಕೊಂಡಿದ್ದ.

ತನ್ನನ್ನು ತಾನು ಸ್ತ್ರೀದ್ವೇಷಿ ಎಂದು ಕರೆದುಕೊಂಡಿರುವ ಟೇಟ್, ತನ್ನ ಟ್ವಿಟರ್ ಖಾತೆಯಲ್ಲಿ ಗ್ರೇಟಾ ಥನ್‌ಬರ್ಗ್‌ರನ್ನು ಟ್ಯಾಗ್ ಮಾಡಿ, "ನನ್ನ ಬಳಿ 33 ಕಾರುಗಳಿದ್ದು, ಅವು ಉಗುಳುವ ದೊಡ್ಡ ಪ್ರಮಾಣದ ಹೊಗೆ ಕುರಿತ ವಿವರಗಳನ್ನು ನಿನ್ನ ಇಮೇಲ್ ವಿಳಾಸ ಒದಗಿಸಿದರೆ ಕಳುಹಿಸುತ್ತೇನೆ" ಎಂದು ಹೇಳಿಕೊಂಡಿದ್ದ.

ಅದಕ್ಕೆ ತಿರುಗೇಟು ನೀಡಿರುವ ಗ್ರೆಟಾ "ಸರಿ, ದಯವಿಟ್ಟು ನನಗೆ ಜ್ಞಾನೋದಯ ಮಾಡಿಸು" ಎಂದು ಪ್ರತಿಕ್ರಿಯಿಸಿ, ತಾನೇ ನಕಲಿಯಾಗಿ ಸೃಷ್ಟಿಸಿದ್ದ "get a life" ಎಂದು ಕೊನೆಯಾಗುವ ಇಮೇಲ್ ವಿಳಾಸವನ್ನು 19ರ ಪ್ರಾಯದ ಗ್ರೇಟಾ ಥನ್‌ಬರ್ಗ್ ಒದಗಿಸಿದ್ದಾಳೆ. ಈ ಪ್ರತಿಕ್ರಿಯೆ ಕೂಡಲೇ ವೈರಲ್ ಆಗಿದೆ.

ಇಬ್ಬರ ನಡುವಿನ ಸಂವಾದ ಇಷ್ಟಕ್ಕೇ ಕೊನೆಯಾಗಿಲ್ಲ. ಅದಕ್ಕೆ ಪ್ರತಿಯಾಗಿ ಟೇಟ್ ವಿಡಿಯೊವೊಂದನ್ನು ಹಂಚಿಕೊಂಡಿದ್ದಾನೆ. ಅದರಲ್ಲಿ ಯಾರಿಂದಲೋ ಫಿಝ್ಝಾ ಬಾಕ್ಸ್‌ಗಳನ್ನು ಪಡೆದು, ಅವನ್ನು ಮೇಜಿನ ಮೇಲೆ ಇಡುತ್ತಿರುವುದು ಕಂಡು ಬಂದಿದೆ.

ಹಲವು ವರದಿಗಳ ಪ್ರಕಾರ, ಫಿಝ್ಝಾ ಬಾಕ್ಸ್ ಮೇಲೆ ಮುದ್ರಿಸಲಾಗಿದ್ದ ಜೆರ್ರೀಸ್ ಫಿಝ್ಝಾ ಎಂಬುದು ರೊಮಾನಿಯದಲ್ಲಿರುವ ಪಿಝಾ ಮಳಿಗೆಯಾಗಿದ್ದು, ಆ ಸುಳಿವನ್ನು ಆಧರಿಸಿ ರೊಮಾನಿಯ ಪೊಲೀಸರು ಆ್ಯಂಡ್ರ್ಯೂ ಟೇಟ್ ಅನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಶಂಕಿಸಿವೆ‌.

ತನ್ನ ಸ್ತ್ರೀದ್ವೇಷಿ ಪ್ರತಿಕ್ರಿಯೆಗಳು ಮತ್ತು ದ್ವೇಷ ಭಾಷಣಗಳ ಕಾರಣಕ್ಕೆ ಟೇಟ್ ಹಲವಾರು ಸಾಮಾಜಿಕ ಮಾಧ್ಯಮಗಳಿಂದ ನಿಷೇಧಕ್ಕೊಳಗಾಗಿದ್ದಾನೆ. ಬುಚರೆಸ್ಟ್‌ನಲ್ಲಿರುವ ಆತನ ಒಡೆತನದ ಆಸ್ತಿಗಳ ಮೇಲೆ ದಾಳಿ ನಡೆಸಿರುವ ಸಂಘಟಿತ ಅಪರಾಧ ನಿಗ್ರಹ ಘಟಕದ ಪೊಲೀಸರು, ಇಬ್ಬರು ಶಂಕಿತ ರೊಮಾನಿಯ ಪ್ರಜೆಗಳೊಂದಿಗೆ ಟೇಟ್ ಸಹೋದರ ಟ್ರೈಸ್ಟಾನ್ ಅನ್ನು 24 ಗಂಟೆಗಳ ಕಾಲ ನಮ್ಮ ವಶದಲ್ಲಿಟ್ಟುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Similar News