ಗುಜರಾತಿನಲ್ಲಿ ಪ್ರತಿ ತಿಂಗಳು 45 ಮಹಿಳೆಯರ ಅತ್ಯಾಚಾರ: ಕೇಂದ್ರ ಗೃಹ ಸಚಿವಾಲಯದ ವರದಿ

Update: 2022-12-30 15:25 GMT

ಅಹ್ಮದಾಬಾದ್,ಡಿ.30: ವಿಧಾನಸಭಾ ಚುನಾವಣೆಗಳ ಸಂದರ್ಭದಲ್ಲಿ 'ಗುಜರಾತ್ ಮಹಿಳೆಯರ ಪಾಲಿಗೆ ಅತ್ಯಂತ ಸುರಕ್ಷಿತ ರಾಜ್ಯ' ಎಂಬ ಬಿಜೆಪಿಯ ರಾಜಕೀಯ ಹೇಳಿಕೆಯನ್ನು ಕೇಂದ್ರ ಗೃಹ ಸಚಿವಾಲಯವು ಗುರುವಾರ ಲೋಕಸಭೆಯಲ್ಲಿ ಮಂಡಿಸಿದ ಅಂಕಿಅಂಶಗಳು ತಳ್ಳಿಹಾಕಿವೆ.

‌ಗುಜರಾತಿನಲ್ಲಿ ಪ್ರತಿ ತಿಂಗಳು ಸರಾಸರಿ 45 ಮಹಿಳೆಯರ ಮೇಲೆ ಅತ್ಯಾಚಾರದ ಪ್ರಕರಣಗಳು ವರದಿಯಾಗುತ್ತಿವೆ, ಆರಕ್ಕೂ ಅಧಿಕ ಮಹಿಳೆಯರ ಮೇಲೆ ಆ್ಯಸಿಡ್ ದಾಳಿಗಳು ನಡೆಯುತ್ತಿವೆ ಮತ್ತು ವರ್ಷವೊಂದಕ್ಕೆ 260 ಮಹಿಳೆಯರು ಹತ್ಯೆಗೀಡಾಗುತ್ತಿದ್ದಾರೆ ಎಂದು ಲೋಕಸಭೆಯಲ್ಲಿ ಮಂಡಿಸಿರುವ ತನ್ನ ವರದಿಯಲ್ಲಿ ತಿಳಿಸಿರುವ ಗೃಹ ಸಚಿವಾಲಯವು, 2018 ಮತ್ತು 2021ರ ನಡುವಿನ ಅವಧಿಯಲ್ಲಿ ಗುಜರಾತಿನಲ್ಲಿ 2,156 ಮಹಿಳೆಯರು ಅತ್ಯಾಚಾರಕ್ಕೊಳಗಾಗಿದ್ದಾರೆ ಎಂದು ಹೇಳಿದೆ.

ಗುಜರಾತಿನಲ್ಲಿ ಪ್ರತಿ ವರ್ಷ ಮಹಿಳೆಯರ ಮೇಲೆ ಅತ್ಯಾಚಾರದ ಸರಾಸರಿ 550 ಪ್ರಕರಣಗಳು ದಾಖಲಾಗುತ್ತಿವೆ ಮತ್ತು ರಾಜ್ಯದಲ್ಲಿ ಮಹಿಳೆಯರ ಮೇಲೆ ಹಲ್ಲೆಗಳೂ ಹೆಚ್ಚುತ್ತಿವೆ. ಕಳೆದ ನಾಲ್ಕು ವರ್ಷಗಳಲ್ಲಿ ಸುಮಾರು 3,762 ಮಹಿಳೆಯರು ಹಲ್ಲೆಗಳಿಗೆ ಗುರಿಯಾಗಿದ್ದಾರೆ, ಅಂದರೆ ತಿಂಗಳೊಂದರಲ್ಲಿ ಸರಾಸರಿ 100 ಮಹಿಳೆಯರ ಮೇಲೆ ದಾಳಿಗಳು ನಡೆಯುತ್ತಿವೆ.

ಗುಜರಾತಿನಲ್ಲಿ ಮಹಿಳೆಯರ ಮೇಲೆ ಆ್ಯಸಿಡ್ ದಾಳಿಗಳ ಪ್ರಮಾಣ ನಗಣ್ಯ ಎಂದು ಗುಜರಾತ್ ಸರಕಾರವು ಹೇಳಿಕೊಳ್ಳುತ್ತಿದೆ,‌ ಆದರೆ ಕೇಂದ್ರ ಗೃಹಸಚಿವಾಲಯದ ವರದಿಯಂತೆ 2018 ಮತ್ತು 2021ರ ನಡುವೆ ರಾಜ್ಯದಲ್ಲಿ ಆ್ಯಸಿಡ್ ದಾಳಿಗಳ 22 ಪ್ರಕರಣಗಳು ದಾಖಲಾಗಿವೆ. ಅಂದರೆ ಪ್ರತಿವರ್ಷ ಸರಾಸರಿ ಆರು ಮಹಿಳೆಯರು ಆ್ಯಸಿಡ್ ದಾಳಿಗೆ ತುತ್ತಾಗುತ್ತಿದ್ದಾರೆ.

ಇಷ್ಟು ಮಾತ್ರವಲ್ಲ,ರಾಜ್ಯದಲ್ಲಿ ಸಾಮೂಹಿಕ ಅತ್ಯಾಚಾರ ಘಟನೆಗಳೂ ಪ್ರತಿ ವರ್ಷ ಹೆಚ್ಚುತ್ತಿವೆ. 2018ರಲ್ಲಿ ರಾಜ್ಯದಲ್ಲಿ ಎಂಟು ಸಾಮೂಹಿಕ ಅತ್ಯಾಚಾರದ ಪ್ರಕರಣಗಳು ನಡೆದಿದ್ದರೆ 2021ರಲ್ಲಿ ಈ ಸಂಖ್ಯೆ 17ಕ್ಕೇರಿತ್ತು. ಕಳೆದ ನಾಲ್ಕು ವರ್ಷಗಳಲ್ಲಿ ಒಟ್ಟು 56 ಸಾಮೂಹಿಕ ಅತ್ಯಾಚಾರ ಘಟನೆಗಳು ವರದಿಯಾಗಿವೆ. ಗೃಹ ಸಚಿವಾಲಯವು ಮಂಡಿಸಿರುವ ಅಂಕಿಅಂಶಗಳನ್ನಿಟ್ಟುಕೊಂಡು ಕಾಂಗ್ರೆಸ್ ಮತ್ತು ಆಪ್ ಸೇರಿದಂತೆ ಪ್ರತಿಪಕ್ಷಗಳು ಬಿಜೆಪಿ ಸರಕಾರವನ್ನು ತಮ್ಮ ದಾಳಿಗೆ ಗುರಿಯಾಗಿಸಿಕೊಂಡಿವೆ.

ಗೃಹ ಸಚಿವಾಲಯದ ಅಂಕಿಅಂಶಗಳು ಗುಜರಾತ ಶಾಂತಿಯುತ ಮತ್ತು ಸುರಕ್ಷಿತ ರಾಜ್ಯವಾಗಿದೆ ಎಂಬ ಚುನಾವಣೆ ಸಂದರ್ಭದಲ್ಲಿನ ಬಿಜೆಪಿ ನಾಯಕರ ಹೇಳಿಕೆಗಳು ಸುಳ್ಳು ಪ್ರಚಾರವಾಗಿತ್ತು ಎನ್ನುವುದನ್ನು ಬಯಲಿಗೆಳೆದಿವೆ. ಗುಜರಾತಿನ ಗೃಹ ಸಚಿವಾಲಯವು ಭ್ರಷ್ಟಾಚಾರದ ಕೇಂದ್ರಬಿಂದುವಾಗಿದ್ದರೆ, ಬಿಜೆಪಿಯು ವಿರೋಧ ಪಕ್ಷಗಳ ಮೇಲೆ ಕಣ್ಣಿರಿಸಲು ಭದ್ರತಾ ಪಡೆಗಳನ್ನು ಬಳಸಿಕೊಳ್ಳುತ್ತಿದೆ. ಹೀಗಾಗಿ ರಾಜ್ಯದಲ್ಲಿ ಮಹಿಳೆಯರ ಸುರಕ್ಷತೆಗೆ ಒತ್ತು ನೀಡಲಾಗುತ್ತಿಲ್ಲ.

ಗುಜರಾತಿನಲ್ಲಿ ಮಹಿಳೆಯರು ಸುರಕ್ಷಿತರಾಗಿ ಉಳಿದಿಲ್ಲ ಎಂದು ಈ ಅಂಕಿಅಂಶಗಳು ಸ್ಪಷ್ಟವಾಗಿ ಸೂಚಿಸಿವೆ. ಮಹಿಳೆಯರ ಸುರಕ್ಷತೆಗಾಗಿ ಬಿಜೆಪಿ ಸರಕಾರವು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ಕಾಂಗ್ರೆಸ್ ಪಕ್ಷವು ಮಹಿಳೆಯರ ಸುರಕ್ಷತೆಗಾಗಿ ಬೀದಿಗಿಳಿದು ಸರಕಾರದ ವಿರುದ್ಧ ಪ್ರತಿಭಟಿಸಲಿದೆ ಎಂದು ಕಾಂಗ್ರೆಸ್ ವಕ್ತರ ಮನೀಷ ದೋಶಿ ಹೇಳಿದರು.

ಬಿಜೆಪಿ ಸರಕಾರದ ವಿರುದ್ಧ ದಾಳಿ ನಡೆಸಿದ ಆಪ್ ವಕ್ತಾರ ಯೋಗೇಶ್ ಜಾಡ್ವಾನಿ ಅವರು,ಗುಜರಾತಿನಲ್ಲಿ ಮಹಿಳೆಯರು ಎಷ್ಟು ಸುರಕ್ಷಿತರಾಗಿದ್ದಾರೆ ಎಂದರೆ ಅವರು ರಾತ್ರಿ ಎರಡು ಗಂಟೆಯ ಸಮಯದಲ್ಲಿಯೂ ಮನೆಗಳಿಂದ ಹೊರಗೆ ಹೋಗಬಹುದು ಎಂದು ಅನೇಕ ಬಿಜೆಪಿ ನಾಯಕರು ವಿಧಾನಸಭಾ ಚುನಾವಣೆಗಳ ಸಂದರ್ಭ ಕೊಚ್ಚಿಕೊಂಡಿದ್ದರು. ಇನ್ನೊಂದೆಡೆ ನೀವು ವೃತ್ತಪತ್ರಿಕೆಗಳನ್ನು ಗಮನಿಸಿದರೆ ಮಹಿಳೆಯರ ಮೇಲಿನ ಅಪರಾಧಗಳ ಸುದ್ದಿ ಪ್ರತಿದಿನವೂ ಪ್ರಕಟವಾಗುತ್ತಿರುತ್ತದೆ.

ಇವು ಅಧಿಕೃತ ಅಂಕಿಅಂಶಗಳಾಗಿವೆ, ಮಹಿಳೆಯರ ವಿರುದ್ಧ ಅಪರಾಧಗಳ ಹಲವಾರು ಪ್ರಕರಣಗಳು ಪೊಲೀಸರಿಗೆ ವರದಿಯಾಗುವುದೇ ಇಲ್ಲ ಮತ್ತು ಕ್ರಿಮಿನಲ್ಗಳಿಗೆ ಪೊಲೀಸರು ಅಥವಾ ಕಾನೂನಿನ ಭಯವಿಲ್ಲದಿದ್ದಾಗ ಅಪರಾಧಗಳು ಹೆಚ್ಚಾಗುತ್ತವೆ ಎಂದು ಹೇಳಿದರು.

Similar News