ಸೌದಿ ಅರೇಬಿಯಾದ ಅಲ್-ನಸ್ರ್‌ ಫುಟ್‌ಬಾಲ್‌ ಕ್ಲಬ್‌ ಪಾಲಾದ ರೊನಾಲ್ಡೊ

Update: 2022-12-31 02:22 GMT

ದುಬೈ: ಪೋರ್ಚ್‌ಗಲ್ ಫುಟ್ಬಾಲ್ ತಂಡದ ನಾಯಕ ಕ್ರಿಸ್ಟಿಯಾನೊ ರೊನಾಲ್ಡೊ ಸೌದಿ ಅರೇಬಿಯಾದ ಅಲ್-ನಸ್ರ್‌ ಕ್ಲಬ್ ಪರ ಮುಂದಿನ ಎರಡೂವರೆ ವರ್ಷಗಳ ಅವಧಿಗೆ ಆಡಲಿದ್ದಾರೆ. ಈ ಸಂಬಂಧ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಕ್ಲಬ್ ಶುಕ್ರವಾರ ಪ್ರಕಟಿಸಿದೆ. ಈಗಾಗಲೇ ರೊನಾಲ್ಡೊ ಮ್ಯಾಂಚೆಸ್ಟರ್ ಯುನೈಟೆಡ್ ತಂಡವನ್ನು ತೊರೆದಿದ್ದಾರೆ.

ಕಳೆದ ತಿಂಗಳು ನೀಡಿದ ಸ್ಫೋಟಕ ಸಂದೇಶದಲ್ಲಿ 37 ವರ್ಷದ ಖ್ಯಾತ ಆಟಗಾರ, "ನನಗೆ ಕ್ಲಬ್ ದ್ರೋಹ ಬಗೆದಿದೆ ಹಾಗೂ ಡಚ್ ಮ್ಯಾನೇಜರ್ ಎರಿಕ್ ಟೆನ್ ಹಗ್ ಅವರ ಬಗ್ಗೆ ಯಾವುದೇ ಗೌರವ ಇಲ್ಲ" ಎಂದು ಹೇಳಿಕೆ ನೀಡಿ ಓಲ್ಡ್ ಟ್ರಾಫರ್ಡ್‌ನಿಂದ ಬೇರ್ಪಟ್ಟಿದ್ದರು.

"ಐದು ಬರಿ ಬ್ಯಾಲನ್ ಡಿವೋರ್ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದ ರೊನಾಲ್ಡೊ 2025ರವರೆಗೆ ಕ್ಲಬ್ ಪರ ಆಡಲು ಒಪ್ಪಿಕೊಂಡಿದ್ದಾರೆ" ಎಂದು ಕ್ಲಬ್ ಹೇಳಿಕೆ ನೀಡಿದೆ. ಆದರೆ ಯಾವುದೇ ಹಣಕಾಸು ವ್ಯವಹಾರವನ್ನು ಬಹಿರಂಗಪಡಿಸಿಲ್ಲ. ಆದರೆ ರೊನಾಲ್ಡೊ ಜತೆ 200 ದಶಲಕ್ಷ ಯೂರೊಗಿಂತಲೂ ಅಧಿಕ ಮೌಲ್ಯದ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಮಾಧ್ಯಮ ವರದಿಗಳು ಅಂದಾಜಿಸಿವೆ.

"ಯೂರೋಪಿಯನ್ ಫುಟ್ಬಾಲ್‌ನಲ್ಲಿ ನಾನು ಇರಿಸಿಕೊಂಡಿದ್ದ ಎಲ್ಲ ಗುರಿಗಳನ್ನು ನಾನು ಗೆದ್ದಿದ್ದೇನೆ ಮತ್ತು ಇದೀಗ ಏಷ್ಯಾದಲ್ಲಿ ನನ್ನ ಅನುಭವ ಹಂಚಿಕೊಳ್ಳಲು ಇದು ಸಕಾಲ ಎಂದು ಭಾವಿಸುತ್ತೇನೆ" ಎಂದು ರೊನಾಲ್ಡೊ ಹೇಳಿದ್ದಾರೆ.

"ನನ್ನ ಹೊಸ ತಂಡದ ಸಹ ಆಟಗಾರರ ಜತೆ ಸೇರಿಕೊಳ್ಳುವುದನ್ನು ನಾನು ಎದುರು ನೋಡುತ್ತಿದ್ದೇನೆ ಹಾಗೂ ಕ್ಲಬ್‌ನ ಯಶಸ್ಸಿಗೆ ನೆರವಾಗಲಿದ್ದೇನೆ" ಎಂದು ಸ್ಪಷ್ಟಪಡಿಸಿದರು.

Similar News