ಮಾಜಿ ಪೋಪ್ ಬೆನೆಡಿಕ್ಟ್ XVI ನಿಧನ: ವ್ಯಾಟಿಕನ್

Update: 2022-12-31 17:02 GMT

ವ್ಯಾಟಿಕನ್ ಸಿಟಿ, ಡಿ.31: ಮಾಜಿ ಪೋಪ್ ಬೆನಡಿಕ್ಟ್ ಅವರು ತಮ್ಮ 95ನೇ ವಯಸ್ಸಿನಲ್ಲಿ ವಯೋಸಹಜ ಅಸ್ವಸ್ಥತೆಯಿಂದ ನಿಧನರಾಗಿದ್ದಾರೆ ಎಂದು ವ್ಯಾಟಿಕನ್ ಸಿಟಿ ವಕ್ತಾರ ಮೇಟ್ಟಿಯೊ ಬ್ರೂನಿ ಮಾಹಿತಿ ನೀಡಿದ್ದಾರೆ.ಅವರ ಅಂತ್ಯಕ್ರಿಯೆ ಪೋಪ್ ಫ್ರಾನ್ಸಿಸ್ ನೇತೃತ್ವದಲ್ಲಿ ವ್ಯಾಟಿಕನ್ ನಲ್ಲಿ ನಡೆಯಲಿದೆ ಎಂದು ವ್ಯಾಟಿಕನ್ ಮೂಲಗಳು ಹೇಳಿವೆ.

1000 ವರ್ಷಗಳಲ್ಲಿ ಪೋಪ್ ಪದವಿ ಪಡೆದ ಮೊದಲ ಜರ್ಮನ್ ಎಂಬ ಹಿರಿಮೆಗೆ ಪಾತ್ರರಾಗಿದ್ದ ಬೆನೆಡಿಕ್ಟ್ 2005ರಲ್ಲಿ ಪೋಪ್ ಪದವಿಗೇರಿದ್ದರು. ಅವರ ಅವಧಿಯಲ್ಲಿ ವ್ಯಾಟಿಕನ್ನಲ್ಲಿ ಒಳಜಗಳ ಮತ್ತು ಮಕ್ಕಳ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣ ಭಾರೀ ವಿವಾದಕ್ಕೆ ಕಾರಣವಾಗಿತ್ತು. 2013ರಲ್ಲಿ ದೈಹಿಕ ಅನಾರೋಗ್ಯದ ಕಾರಣ ನೀಡಿ ಅವರು ಪೋಪ್ ಹುದ್ದೆಗೆ ರಾಜೀನಾಮೆ ನೀಡಿದ್ದ ಬೆನಡಿಕ್ಟ್ ತಮ್ಮ ಉತ್ತರಾಧಿಕಾರಿ ಪೋಪ್ ಫ್ರಾನ್ಸಿಸ್ ಜತೆ ಉತ್ತಮ ಸಂಬಂಧವನ್ನು ಹೊಂದಿದ್ದರು. ಆದರೆ ಹುದ್ದೆ ತ್ಯಜಿಸಿದ ಬಳಿಕವೂ ವ್ಯಾಟಿಕನ್ನಲ್ಲಿ ಬೆನಡಿಕ್ಟ್ ಅವರ ನಿರಂತರ ಉಪಸ್ಥಿತಿ ಚರ್ಚ್ ಅನ್ನು ಸೈದ್ಧಾಂತಿಕವಾಗಿ ಧ್ರುವೀಕರಿಸಿತು. ಫ್ರಾನ್ಸಿಸ್ ಅವರ ಪ್ರಗತಿಪರ ನಡೆಗಳಿಂದ ಗಾಭರಿಗೊಂಡ ಸಂಪ್ರದಾಯವಾದಿಗಳು ಬೆನಡಿಕ್ಟ್ ಅವರನ್ನು ಸಂಪ್ರದಾಯದ ರಕ್ಷಕರೆಂದು ಪ್ರತಿಪಾದಿಸಿದರು.

ಚರ್ಚ್ ಗಳನ್ನು ರಕ್ಷಿಸಿದರು; ಮಕ್ಕಳನ್ನಲ್ಲ:

ಕ್ಯಾಥೊಲಿಕ್ ಚರ್ಚ್ ಗಳಲ್ಲಿ ಧರ್ಮಗುರುಗಳ ಲೈಂಗಿಕ ದೌರ್ಜನ್ಯದ ಕುರಿತ ಆರೋಪವನ್ನು ಎದುರಿಸಿದ ಪ್ರಥಮ ಪೋಪ್ ಎನಿಸಿದ್ದ ಬೆನಡಿಕ್ಟ್, ಅದನ್ನು ಮುಚ್ಚಿಟ್ಟ ಆರೋಪವನ್ನೂ ಎದುರಿಸಿದ್ದರು. ಬೆನಡಿಕ್ಟ್ ಚರ್ಚ್ಗಳನ್ನು ರಕ್ಷಿಸಿದರು, ಮಕ್ಕಳನ್ನಲ್ಲ ಎಂಬ ಟೀಕೆ ವ್ಯಾಪಕವಾಗಿತ್ತು.

 ಪ್ರಪಂಚದಾದ್ಯಂತ ಪಾದ್ರಿಗಳಿಂದ ಮಕ್ಕಳ ಮೇಲೆ ವ್ಯಾಪಕವಾದ ಲೈಂಗಿಕ ದೌರ್ಜನ್ಯದ ಪ್ರಕರಣ ಹಾಗೂ ಅಪರಾಧವನ್ನು ಮುಚ್ಚಿಡಲು ಕ್ಯಾಥೊಲಿಕ್ ಚರ್ಚ್ ನ ಪ್ರಯತ್ನಗಳ ಬಗ್ಗೆ 1980ರ ದಶಕದ ಉತ್ತರಾರ್ಧದಲ್ಲಿ ಹಲವು ವರದಿ ಪ್ರಕಟವಾದವು. 2001ರಲ್ಲಿ ಆಗಿನ ಪೋಪ್ ಜಾನ್ ಪಾಲ್ , ಈ ಪ್ರಕರಣಗಳ ಕುರಿತ ದಾಖಲೆಗಳನ್ನು ವ್ಯಾಟಿಕನ್ನ ಪ್ರಭಾವೀ ಕಚೇರಿಗೆ ಸಲ್ಲಿಸಲು ಆದೇಶಿಸಿದರು. ಬೆನಡಿಕ್ಟ್ ಈ ಕಚೇರಿಯ ಮುಖ್ಯಸ್ಥರಾಗಿದ್ದರು. ಲೈಂಗಿಕ ದೌರ್ಜನ್ಯದ ಆರೋಪದ ತನಿಖೆಯ ಉಸ್ತುವಾರಿ ಬೆನೆಡಿಕ್ಟ್ ಅವರದಾಗಿತ್ತು. ಆದರೆ ಬೆನಡಿಕ್ಟ್ ಎಲ್ಲಾ ಬಿಷಪ್ ಗಳಿಗೆ ಕಳುಹಿಸಿದ್ದ ರಹಸ್ಯ ಪತ್ರದ ಮಾಹಿತಿ 2001ರಲ್ಲಿ ಸೋರಿಕೆಯಾಗಿತ್ತು.‘ತನಿಖೆಗಳನ್ನು ರಹಸ್ಯವಾಗಿಡುವಂತೆ’ ಈ ಪತ್ರದಲ್ಲಿ ಬೆನಡಿಕ್ಟ್ ಸೂಚಿಸಿದ್ದು ಅವರು ಆರೋಪಿಗಳನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತವಾಗಿತ್ತು. ಬೆನಡಿಕ್ಟ್ ಚರ್ಚ್ ಗಳನ್ನು ರಕ್ಷಿಸುತ್ತಿದ್ದಾರೆ, ಮಕ್ಕಳನ್ನಲ್ಲ’ ಎಂಬ ವ್ಯಾಪಕ ಟೀಕೆ ಕೇಳಿಬಂದಿತ್ತು.1980ರಲ್ಲಿ ಮ್ಯೂನಿಚ್ನ ಆರ್ಚ್ ಬಿಷಪ್ ಆಗಿದ್ದಾಗ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಆರೋಪದ ನಾಲ್ಕು ಪಾದ್ರಿಗಳನ್ನು ತಡೆಯಲು ಉದ್ದೇಶಪೂರ್ವಕ ವಿಫಲವಾಗಿದ್ದಾರೆ ಎಂಬ ಅರೋಪವೂ ಕೇಳಿಬಂದಿತ್ತು.ಆದರೆ, ಈ ಆರೋಪಗಳನ್ನು ಬೆನಡಿಕ್ಟ್ ಅವರ ಆಪ್ತಸಹಾಯಕರು ನಿರಾಕರಿಸಿದ್ದರು.

Similar News