ಕಾಶ್ಮೀರ: 2022ರಲ್ಲಿ 172 ಭಯೋತ್ಪಾದಕರ ಹತ್ಯೆ

Update: 2022-12-31 15:09 GMT

ಶ್ರೀನಗರ,ಡಿ.31: ಈ ವರ್ಷ ಕಾಶ್ಮೀರದಲ್ಲಿ ನಡೆಸಲಾದ 93 ಯಶಸ್ವಿ ಕಾರ್ಯಾಚರಣೆಗಳಲ್ಲಿ 42 ವಿದೇಶಿಯರು ಸೇರಿದಂತೆ ಒಟ್ಟು 172 ಭಯೋತ್ಪಾದಕರು ಕೊಲ್ಲಲ್ಪಟ್ಟಿದ್ದಾರೆ ಎಂದು ಕಾಶ್ಮೀರದ ಎಡಿಜಿಪಿ ವಿಜಯ ಕುಮಾರ(Vijay Kumar) ಅವರು ಶನಿವಾರ ಟ್ವೀಟಿಸಿದ್ದಾರೆ. ಭಯೋತ್ಪಾದಕ ಸಂಘಟನೆಗಳಿಗೆ ಯುವಜನರ ಭರ್ತಿ ಈ ವರ್ಷ ಶೇ.37ರಷ್ಟು ಇಳಿಕೆಯಾಗಿದೆ ಎಂದೂ ಅವರು ತಿಳಿಸಿದ್ದಾರೆ.

ಹತ್ಯೆಯಾದವರಲ್ಲಿ ಲಷ್ಕರೆ ತೈಬಾ ಮತ್ತು ದಿ ರೆಸಿಸ್ಟನ್ಸ್ ಫ್ರಂಟ್ಗೆ ಸೇರಿದ 108,ಜೈಷೆ ಮುಹಮ್ಮದ್ ನ 35,ಹಿಝ್ಬುಲ್ ಮುಜಾಹಿದೀನ್ನ 22,ಅಲ್-ಬದ್ರ್ ನ ನಾಲ್ವರು ಮತ್ತು ಅನ್ಸಾರ್ ಘಝ್ವತ್-ಉಲ್-ಹಿಂದ್ನ ಮೂವರು ಭಯೋತ್ಪಾದಕರು ಸೇರಿದ್ದಾರೆ ಎಂದು ವಿಜಯಕುಮಾರ್ ಸರಣಿ ಟ್ವೀಟ್ಗಳಲ್ಲಿ ಹೇಳಿದ್ದಾರೆ.

2022ರಲ್ಲಿ ಭಯೋತ್ಪಾದಕ ದಾಳಿಗಳು ಮತ್ತು ಎನ್ ಕೌಂಟರ್ ಗಳಲ್ಲಿ ಜಮ್ಮು-ಕಾಶ್ಮೀರದ 14 ಪೊಲೀಸರು ಸೇರಿದಂತೆ 26 ಭದ್ರತಾ ಪಡೆ ಸಿಬ್ಬಂದಿಗಳು ಕೊಲ್ಲಲ್ಪಟ್ಟಿದ್ದಾರೆ ಎಂದೂ ಅವರು ತಿಳಿಸಿದ್ದಾರೆ.

ಈ ಅವಧಿಯಲ್ಲಿ 29 ನಾಗರಿಕರು ಕೊಲ್ಲಲ್ಪಟ್ಟಿದ್ದು,ಈ ಪೈಕಿ ಮೂವರು ಕಾಶ್ಮೀರಿ ಪಂಡಿತರು ಸೇರಿದಂತೆ ಆರು ಹಿಂದುಗಳು ಮತ್ತು 15 ಮುಸ್ಲಿಮರು ಸ್ಥಳೀಯರಾಗಿದ್ದರೆ,ಎಂಟು ಜನರು ಹೊರರಾಜ್ಯಗಳಿಗೆ ಸೇರಿದವರಾಗಿದ್ದರು.

ಈ ವರ್ಷ 100 ಯುವಜನರು ಹೊಸದಾಗಿ ಭಯೋತ್ಪಾದಕ ಗುಂಪುಗಳಿಗೆ ಸೇರ್ಪಡೆಗೊಂಡಿದ್ದು,ಈ ಪೈಕಿ 74 ಜನರು ಲಷ್ಕರೆ ತೈಬಾದೊಂದಿಗೆ ಕೈಜೋಡಿಸಿದ್ದಾರೆ. ಹೊಸದಾಗಿ ಭರ್ತಿಯಾಗಿದ್ದವರ ಪೈಕಿ 65 ಭಯೋತ್ಪಾದಕರನ್ನು ಕೊಲ್ಲಲಾಗಿದ್ದು,17 ಜನರನ್ನು ಬಂಧಿಸಲಾಗಿದೆ, 18 ಭಯೋತ್ಪಾದಕರು ಈಗಲೂ ಸಕ್ರಿಯರಾಗಿದ್ದಾರೆ ಎಂದಿದ್ದಾರೆ.

ಹೊಸದಾಗಿ ಭರ್ತಿಯಾಗಿದ್ದ ಭಯೋತ್ಪಾದಕರ ಜೀವಿತಾವಧಿಯೂ ಗಣನೀಯವಾಗಿ ಕುಸಿದಿದೆ ಎಂದಿರುವ ವಿಜಯಕುಮಾರ,ಹೆಚ್ಚಿನವರು ಭರ್ತಿಯಾದ ಒಂದು ತಿಂಗಳಲ್ಲಿಯೇ ಭದ್ರತಾ ಪಡೆಗಳ ಗುಂಡುಗಳಿಗೆ ಬಲಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.

ಎನ್ಕೌಂಟರ್ಗಳು ಮತ್ತು ಭಯೋತ್ಪಾದಕರ ಮಾಡ್ಯೂಲ್ಗಳ ಮೇಲಿನ ದಾಳಿಗಳ ಸಂದರ್ಭದಲ್ಲಿ 360 ವಿವಿಧ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಟ್ವೀಟ್ನಲ್ಲಿ ತಿಳಿಸಿರುವ ವಿಜಯಕುಮಾರ,ಈ ವರ್ಷ ಸಮಾಜದಲ್ಲಿ ಎರಡು ಮಹತ್ತರ ಬದಲಾವಣೆಗಳು ಕಂಡುಬಂದಿವೆ. ಮನೆಗಳ ಮಾಲಿಕರು ಭಯೋತ್ಪಾದಕರಿಗೆ ಆಶ್ರಯ ನಿರಾಕರಿಸುತ್ತಿದ್ದು,ತಮ್ಮ ಮಕ್ಕಳು ಭಯೋತ್ಪಾದಕ ಸಂಘಟನೆಗಳನ್ನು ಸೇರುವುದನ್ನು ಹೆತ್ತವರು ಬಹಿರಂಗವಾಗಿ ವಿರೋಧಿಸುತ್ತಿದ್ದಾರೆ ಎಂದಿದ್ದಾರೆ.

Similar News