ದೇಶದಲ್ಲಿ ಬಿಜೆಪಿ ವಿರುದ್ಧ ಬೃಹತ್ ಸುಪ್ತ ಅಲೆಯಿದೆ: ರಾಹುಲ್ ಗಾಂಧಿ

Update: 2022-12-31 15:27 GMT

ಹೊಸದಿಲ್ಲಿ,ಡಿ.31: ದೇಶಾದ್ಯಂತ ಬಿಜೆಪಿ ವಿರುದ್ಧ ಬೃಹತ್ ಸುಪ್ತ ಅಲೆಯಿದೆ ಎಂದು ಶನಿವಾರ ಇಲ್ಲಿ ಹೇಳಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi)ಯವರು,ಜನರೆದುರು ಪರ್ಯಾಯ ದೃಷ್ಟಿಕೋನವನ್ನು ಮಂಡಿಸಲು ಒಗ್ಗೂಡುವಂತೆ ಪ್ರತಿಪಕ್ಷಗಳನ್ನು ಆಗ್ರಹಿಸಿದರು.

ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು,ಭಾರತ ಜೋಡೊ ಯಾತ್ರೆಯು ಜನರಿಗೆ ಹೊಸರೀತಿಯ ಕೆಲಸ ಮತ್ತು ಚಿಂತನೆಯನ್ನು ಪ್ರಸ್ತುತಪಡಿಸಲು ಚೌಕಟ್ಟನ್ನು ಒದಗಿಸಿದೆ ಎಂದು ಹೇಳಿದರು.

ದೇಶದ ರಾಜಕೀಯ ಕ್ಷೇತ್ರದಲ್ಲಿ ಸಂಪೂರ್ಣ ಪ್ರಾಬಲ್ಯವನ್ನು ಸಾಧಿಸುತ್ತಿರುವ ಬಿಜೆಪಿಯ ವಿರುದ್ಧ ಹೋರಾಡಲು ಪ್ರತಿಪಕ್ಷ ನಾಯಕರು ಮತ್ತು ಕಾಂಗ್ರೆಸ್ ನಡುವೆ ಪರಸ್ಪರ ಗೌರವವನ್ನು ತಾನು ಬಯಸಿರುವುದಾಗಿ ಹೇಳಿದ ಅವರು,ಪ್ರತಿಪಕ್ಷಗಳು ದೂರದೃಷ್ಟಿಯೊಂದಿಗೆ ಗಟ್ಟಿಯಾಗಿ ನಿಂತರೆ ಚುನಾವಣೆಗಳಲ್ಲಿ ಗೆಲ್ಲುವುದು ಬಿಜೆಪಿಗೆ ಕಠಿಣವಾಗಲಿದೆ,ಆದರೆ ಪ್ರತಿಪಕ್ಷಗಳು ಪರಿಣಾಮಕಾರಿಯಾಗಿ ಸಮನ್ವಯವನ್ನು ಸಾಧಿಸಬೇಕು ಮತ್ತು ಪರ್ಯಾಯ ದೃಷ್ಟಿಕೋನದೊಂದಿಗೆ ಜನರ ಬಳಿಗೆ ಹೋಗಬೇಕು ಎಂದರು. ಬಿಜೆಪಿ ವಿರುದ್ಧ ಬೃಹತ್ ಸುಪ್ತ ಅಲೆಯಿದೆ ಎಂದು ಹೇಳಿದ ರಾಹುಲ್,ಭಾರತದ ಸಾಂಸ್ಥಿಕ ಚೌಕಟ್ಟು ಈಗ ಒಂದು ಸಿದ್ಧಾಂತದಿಂದ ನಿಯಂತ್ರಿತವಾಗಿದೆ. ಅವರು ಭಾರತದ ರಾಜಕೀಯ ಕ್ಷೇತ್ರವನ್ನು ಸಂಪೂರ್ಣವಾಗಿ ಆವರಿಸಿಕೊಳ್ಳುತ್ತಿದ್ದಾರೆ. ಅವರನ್ನು ಸೋಲಿಸಲು ನೀವು ಸಿದ್ಧಾಂತವೊಂದನ್ನು ಹೊಂದಿರಬೇಕು ಎಂದರು.

ತನ್ನ ದೃಷ್ಟಿಕೋನವನ್ನು ವಿವರಿಸಿದ ರಾಹುಲ್,ಭಾರತವು ‘ಬಾಡಿಗೆಯನ್ನು ಹುಡುಕುವ’ ದೇಶವಾಗುವ ಬದಲು ‘ಉತ್ಪಾದಕ ರಾಷ್ಟ್ರ’ವಾಗಿ ಹೊರಹೊಮ್ಮಬೇಕು. ಅದು ತಮ್ಮ ಕಲ್ಪನೆಗಳಿಗೆ ರೆಕ್ಕೆಗಳನ್ನು ನೀಡಲು ಮಕ್ಕಳಿಗೆ ಅವಕಾಶವನ್ನು ಒದಗಿಸುವ ಮತ್ತು ಅವರು ವೈದ್ಯಕೀಯ,ಇಂಜಿನಿಯರಿಂಗ್,ನಾಗರಿಕ ಸೇವೆಗಳು ಮತ್ತು ಕಾನೂನು ವೃತ್ತಿಜೀವನಗಳಾಚೆ ನೋಡುವಂತೆ ಮಾಡುವ ಶಿಕ್ಷಣ ನೀತಿಯನ್ನು ಹೊಂದಿರಬೇಕು ಎಂದರು. ಸ್ಪಷ್ಟ ವಿದೇಶಾಂಗ ನೀತಿ ಮತ್ತು ಹೆಚ್ಚಿನ ಆರ್ಥಿಕ ಸಮಾನತೆಯ ಕುರಿತೂ ಮಾತನಾಡಿದ ಅವರು,ಬೃಹತ್ ಉದ್ಯಮಗಳು ಆರ್ಥಿಕತೆಯಲ್ಲಿ ಪ್ರಮುಖ ಪಾತ್ರವನ್ನು ಹೊಂದಿರುವುದರಿಂದ ತಾನು ಅವುಗಳ ಪರವಾಗಿದ್ದೇನೆ,ಆದರೆ ಅವು ಕೇವಲ 2-3 ಜನರಿಂದ ನಿಯಂತ್ರಿಸಲ್ಪಡಬಾರದು ಎಂದರು.

Similar News