ಭಾರತದ ತಪ್ಪು ನಕಾಶೆ ಕುರಿತು ಸಚಿವರ ಎಚ್ಚರಿಕೆ:ಟ್ವೀಟ್ ಅಳಿಸಿದ ವಾಟ್ಸ್‌ಆ್ಯಪ್

Update: 2022-12-31 16:00 GMT

ಹೊಸದಿಲ್ಲಿ,ಡಿ.31: ವಾಟ್ಸ್‌ಆ್ಯಪ್(WHATSAPP) ಹೊಸವರ್ಷದ ಮುನ್ನಾ ದಿನ ತನ್ನ ಬಹು-ತಾಣ ಲೈವ್‌ಸ್ಟ್ರೀಮ್‌ನ ಪ್ರಚಾರಾರ್ಥ ತನ್ನ ಟ್ವಿಟರ್ ಹ್ಯಾಂಡಲ್‌ನಲ್ಲಿ ಮಾಡಿದ್ದ ಟ್ವೀಟ್‌ನಲ್ಲಿ ಭಾರತದ ತಪ್ಪು ನಕಾಶೆಯನ್ನು ತೋರಿಸುವ ಗ್ರಾಫಿಕ್‌ನ್ನು ಪೋಸ್ಟ್ ಮಾಡಿದ್ದಕ್ಕಾಗಿ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ರಾಜೀವ ಚಂದ್ರಶೇಖರ್(Rajeev Chandrasekhar) ಅವರು ಶನಿವಾರ ಸೂಕ್ಷ್ಮ ಎಚ್ಚರಿಕೆ ನೀಡಿದ ಬಳಿಕ ಸದ್ರಿ ಟ್ವೀಟ್‌ನ್ನು ಅಳಿಸಿರುವ ಕಂಪನಿಯು ಕ್ಷಮೆಯನ್ನು ಯಾಚಿಸಿದೆ.

ವಾಟ್ಸ್‌ಆ್ಯಪ್ ಜಾಗತಿಕ ನಕಾಶೆಯಲ್ಲಿ ಭಾರತವನ್ನು ಪ್ರಮುಖವಾಗಿ ಬಿಂಬಿಸುವಾಗ ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಚೀನಾ ತನ್ನದೆಂದು ಪ್ರತಿಪಾದಿಸಿರುವ ಕೆಲವು ಭಾರತೀಯ ಭೂಪ್ರದೇಶಗಳನ್ನು ಕೈಬಿಟ್ಟಿತ್ತು.

ತಪ್ಪನ್ನು ಸರಿಪಡಿಸುವಂತೆ ವಾಟ್ಸ್‌ಆ್ಯಪ್‌ಗೆ ಮಾಡಿಕೊಂಡಿದ್ದ ‘ಮನವಿ’ಯಲ್ಲಿ ಸಚಿವರು ‘ಭಾರತದಲ್ಲಿ ವ್ಯವಹಾರವನ್ನು ನಡೆಸುವ ಮತ್ತು/ಅಥವಾ ಭಾರತದಲ್ಲಿ ವ್ಯವಹಾರವನ್ನು ಮುಂದುವರಿಸಲು ಬಯಸುವ ಎಲ್ಲ ವೇದಿಕೆಗಳು ಸರಿಯಾದ ನಕಾಶೆಗಳನ್ನು ಬಳಸಬೇಕು’ ಎಂದು ಟ್ವೀಟಿಸಿದ್ದರು.

ಚಂದ್ರಶೇಖರ ತನ್ನ ಟ್ವೀಟ್‌ನ್ನು ವಾಟ್ಸ್‌ಆ್ಯಪ್‌ನ ಮಾತೃಸಂಸ್ಥೆ ಮೆಟಾಕ್ಕೆ ಟ್ಯಾಗ್ ಮಾಡಿದ್ದರು.

 ಇದರ ಬೆನ್ನಿಗೇ ಟ್ವೀಟ್‌ನ್ನು ಅಳಿಸಿರುವ ವಾಟ್ಸ್‌ಆ್ಯಪ್ ಕ್ಷಮೆ ಯಾಚಿಸಿದೆ.

Similar News