ಸರಕಾರಿ ನೌಕರರು ಸಮಸ್ಯೆಗಳನ್ನು ಮರೆತು ಜನರಿಗೆ ಸೇವೆ ಸಲ್ಲಿಸುತ್ತಿರುವ ಕಾರ್ಯ ಶ್ಲಾಘನೀಯ: ಉ.ಕ. ಜಿಲ್ಲಾಧಿಕಾರಿ
ಭಟ್ಕಳ: ಸದಾ ಒತ್ತಡದಲ್ಲಿರುವ ಸರಕಾರಿ ನೌಕರರು ಕಚೇರಿಯಲ್ಲಿರುವ ನ್ಯೂನತೆಗಳನ್ನು ಬದಿಗೊತ್ತಿ ಸಮಸ್ಯೆಗಳನ್ನು ಮರೆತು ಜನರಿಗೆ ಸೇವೆ ಸಲ್ಲಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟೆ ತಿಳಿಸಿದ್ದಾರೆ.
ಅವರು ನಗರದ ಶ್ರೀ ಗುರುಸುದೀಂದ್ರ ಕಾಲೇಜಿನ ಮೈಧಾನದಲ್ಲಿ ಸರಕಾರಿ ನೌಕರರ ಜಿಲ್ಲಾಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಸರಕಾರಿ ನೌಕರರು ಎಂಬ ಹೆಮ್ಮೆ ನಮ್ಮ ನೌಕರರಲ್ಲಿರಬೇಕು, ಎಲ್ಲಿ ನಾವು ಇರುತ್ತೇವೋ ಅಲ್ಲಿ ನಾವು ಸೇವಾ ಮನೋಭಾವನೆಯಿಂದ ತಮ್ಮ ಕರ್ತವ್ಯವನ್ನು ನಿರ್ವಹಿಸಿದರೆ ನಮ್ಮ ಮನಸ್ಸು ಕೂಡ ಸಂತೃಪ್ತಗೊಳ್ಳುತ್ತದೆ ಎಂದರು.
ಕ್ರೀಡೆಯಲ್ಲಿ ಉತ್ತಮ ಸೇವೆ ಸಲ್ಲಿಸಿದವರಿಗೆ ಸರಕಾರಿ ಸೇವೆಯನ್ನು ಕೈಗೊಳ್ಳಲು ಸರಕಾರ ಅವಕಾಶ ಮಾಡಿಕೊಟ್ಟಿದೆ. ಈ ಅವಕಾಶವನ್ನು ಎಲ್ಲರೂ ಬಳಸಿಕೊಳ್ಳಬೇಕು ಎಂದರಲ್ಲದೇ ಈ ಕ್ರೀಡಾಕೂಟವನ್ನು ಅತ್ಯಂತ ಯಶಸ್ವಿಯಾಗಿ ಕೈಗೊಂಡ ಭಟ್ಕಳ ಸರಕಾರಿ ನೌಕರರ ಸಂಘಕ್ಕೆ ಅಭಿನಂದನೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಪಶ್ಚಿಮಘಟ್ಟ ಸರಂಕ್ಷಣಾ ಕಾರ್ಯಪಡೆ ಅಧ್ಯಕ್ಷ ಗೋವಿಂದ ನಾಯ್ಕ ಮಾತನಾಡಿದ ವರ್ಷವಿಡೀ ಕರ್ತವ್ಯದಲ್ಲಿರುವ ಸರಕಾರಿ ನೌಕರರು ಒತ್ತಡದಲ್ಲಿ ಜನರಿಗೆ ಸೇವೆ ನೀಡುತ್ತಾರೆ. ಅವರು ಆತ್ಮವಿಶ್ವಾಸ ಹಾಗೂ ನಿಷ್ಠೆಯಿಂದ ತಮ್ಮ ಕರ್ತವ್ಯವನ್ನು ನಿರ್ವಹಿಸಿದರೆ ಅವರಿಗೆ ಸಾರ್ವಜನಿಕರ ಬೆಂಬಲ ಯಾವತ್ತೂ ಇರುತ್ತದೆ ಎಂದರು.
ಪ್ರಾರಂಭದಲ್ಲಿ ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಮೋಹನ ಪ್ರಾಸ್ತಾವಿಕ ಮಾತನಾಡಿ, ನಮ್ಮ ನೌಕರರ ಸಂಘವು ನಮ್ಮ ಸರಕಾರಿ ಕೆಲಸದೊಂದಿಗೆ ಸಾಮಾಜಿಕ ಕಾರ್ಯಕವನ್ನು ಕೈಗೊಂಡು ಇತರರಿಗೆ ಮಾದರಿಯಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ನೌಕರರ ಸಂಘದ ಜಿಲ್ಲಾಧ್ಯಕ್ಷ ಸಂಜೀವ್ ಕುಮಾರ್ ನಾಯ್ಕ ವಹಿಸಿದ್ದರು.
ವೇದಿಕೆಯಲ್ಲಿ ಉಪವಿಭಾಗಾಧಿಕಾರಿ ಮಮತಾ ದೇವಿ, ತಹಶೀಲ್ದಾರ ಸುಮಂತ ಎಸ್. ಪುರಸಭೆಯ ಅಧ್ಯಕ್ಷ ಪರ್ವೇಝ್ ಕಾಶೀಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಪ್ರವೀಣ ಕುಮಾರ, ಹೊನ್ನಾವರ ಸರಕಾರಿ ನೌಕರರ ಸಂಘದ ಅಧ್ಯಕ್ಷ ಮಹಾಭಲೇಶ್ವರ ನಾಯ್ಕ ಸೇರಿದಂತೆ ವಿವಿಧ ತಾಲೂಕಿನ ನೌಕರರ ಸಂಘದ ಅದ್ಯಕ್ಷರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪಶ್ಚಿಮ ಘಟ್ಟ ಸಂರಕ್ಷಣಾ ಕಾರ್ಯಪಡೆಯ ಅಧ್ಯಕ್ಷ ಗೋವಿಂದ ನಾಯ್ಕ ಹಾಗೂ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ಕ್ರೀಡಾಪಟು ವೆಂಕಟೇಶ ಪ್ರಭು ಹಾಗೂ ಇನ್ನಿತರರನ್ನು ವೇದಿಕೆಯಲ್ಲಿ ಭಟ್ಕಳ ತಾಲೂಕು ನೌಕರರ ಸಂಘದಿಂದ ಸನ್ಮಾನಿಸಲಾಯಿತು.
ನಾಗರಾಜ್ ಪಟಗಾರ ಅವರು ವಂದಿಸಿದರು.