ರಶ್ಯ ನಾಶಕ್ಕೆ ಪಾಶ್ಚಿಮಾತ್ಯರಿಂದ ಉಕ್ರೇನ್ ಬಳಕೆ: ಪುಟಿನ್

Update: 2023-01-01 18:21 GMT

ಮಾಸ್ಕೊ, ಜ.1: ರಶ್ಯಾವನ್ನು ನಾಶಗೊಳಿಸಲು ಉಕ್ರೇನ್ ಅನ್ನು ಸಾಧನವಾಗಿ ಬಳಸುವ ಪಶ್ಚಿಮದ ಪ್ರಯತ್ನಗಳಿಗೆ ತಮ್ಮ ದೇಶ ಎಂದಿಗೂ ಮಣಿಯುವುದಿಲ್ಲ ಎಂದು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೇಳಿದ್ದಾರೆ.

‘ ತನ್ನ ಮಾತೃಭೂಮಿಯ ರಕ್ಷಣೆಗೆ ಮತ್ತು ತನ್ನ ಜನರಿಗೆ ನಿಜವಾದ ಸ್ವಾತಂತ್ರ್ಯವನ್ನು ಖಾತರಿಪಡಿಸಲು ರಶ್ಯವು ಉಕ್ರೇನ್ನಲ್ಲಿ ಹೋರಾಡುತ್ತಿದೆ’ ಎಂದು ಸರಕಾರಿ ಸ್ವಾಮ್ಯದ ಟಿವಿ ವಾಹಿನಿಯಲ್ಲಿ ಪ್ರಸಾರವಾದ ವೀಡಿಯೊ ಸಂದೇಶದಲ್ಲಿ ಪುಟಿನ್ ಪ್ರತಿಪಾದಿಸಿದ್ದಾರೆ.

‘ನೈತಿಕ, ಐತಿಹಾಸಿಕ ಸತ್ಯ ನಮ್ಮ ಕಡೆಗಿದೆ. ಡೊನ್ಬಾಸ್ನ ಬಿಕ್ಕಟ್ಟು ಪರಿಹಾರ ಸೇರಿದಂತೆ ಹಲವು ಸಮಸ್ಯೆಗಳನ್ನು ಶಾಂತಿಯುತ ರೀತಿಯಲ್ಲಿ ಪರಿಹರಿಸಲು ತಾವು ಆಸಕ್ತರಾಗಿದ್ದೇವೆ ಎಂದು ಪಾಶ್ಚಿಮಾತ್ಯ ಗಣ್ಯರು ಹಲವು ವರ್ಷಗಳಿಂದ ಪುನರುಚ್ಚರಿಸುತ್ತಾ ಬಂದಿದ್ದರು. ಆದರೆ ನಿಜವಾಗಿ ಅವರು ಮಾಡಿದ್ದೆಂದರೆ ಉಕ್ರೇನ್ ನಲ್ಲಿನ ನಾಝಿಗಳನ್ನು ಪ್ರೋತ್ಸಾಹಿಸಿದ್ದು. ಶಾಂತಿಯ ಬಗ್ಗೆ ಸುಳ್ಳು ಹೇಳುತ್ತಾ ಅವರು ಆಕ್ರಮಣಕ್ಕೆ ಸಿದ್ಧತೆ ಮಾಡಿಕೊಂಡಿದ್ದರು.

2022 ಕಷ್ಟಕರ, ಅಗತ್ಯ ನಿರ್ಧಾರದ ವರ್ಷವಾಗಿತ್ತು. ರಶ್ಯ ಒಕ್ಕೂಟದ ಸಂಪೂರ್ಣ ಸಾರ್ವಭೌಮತ್ವವನ್ನು ಸಾಧಿಸುವತ್ತ ಪ್ರಮುಖ ಹೆಜ್ಜೆ ಇರಿಸುವ, ಸಮಾಜವನ್ನು ಸಶಕ್ತಗೊಳಿಸುವ ವರ್ಷವಾಗಿತ್ತು. ಈ ವರ್ಷ ಸ್ಪಷ್ಟವಾಗಿ ಎಲ್ಲವನ್ನೂ ಅದಕ್ಕೆ ತಕ್ಕುದಾದ ಸ್ಥಾನದಲ್ಲಿ ಇರಿಸಿದೆ. ಧೈರ್ಯಶಾಲಿಗಳು ಮತ್ತು ಧೀರರನ್ನು ದ್ರೋಹಿಗಳು ಮತ್ತು ಹೇಡಿಗಳಿಂದ ಪ್ರತ್ಯೇಕಿಸಿದೆ ’ ಎಂದು ಪುಟಿನ್ ಹೇಳಿದ್ದಾರೆ.
ತಮ್ಮ ಭಾಷಣದುದ್ದಕ್ಕೂ ನಿರಂತರ ಕೆಮ್ಮುತ್ತಿದ್ದ ಪುಟಿನ್ ಅನಾರೋಗ್ಯದಿಂದ ಬಳಲುತ್ತಿರುವುದು ಸ್ಪಷ್ಟವಾಗಿದೆ. ಅಲ್ಲದೆ, ಅವರ ಜತೆಯಲ್ಲಿ ಕಾಣಿಸಿಕೊಂಡ ಮಿಲಿಟರಿ ಅಧಿಕಾರಿಗಳು ನಟರು. ಪ್ರತೀ ಬಾರಿ ಪುಟಿನ್ ಭಾಷಣದ ಸಂದರ್ಭ ಈ ನಟರೇ ಫೋಟೋಗೆ ಫೋಸ್ ನೀಡುತ್ತಿದ್ದಾರೆ ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.

Similar News