ಉತ್ತರ ಪ್ರದೇಶದ ಮಾಜಿ ಶಾಸಕ ಮುಖ್ತಾರ್ ಅನ್ಸಾರಿ ಶಿಕ್ಷೆಗೆ ಸುಪ್ರೀಂ ತಡೆ

Update: 2023-01-03 05:45 GMT

ಹೊಸದಿಲ್ಲಿ: ಉತ್ತರ ಪ್ರದೇಶದ ಮಾಜಿ ಶಾಸಕ ಮುಖ್ತಾರ್ ಅನ್ಸಾರಿ ಅವರನ್ನು ಏಳು ವರ್ಷದ ಜೈಲು ಶಿಕ್ಷೆಗೆ ಗುರಿಪಡಿಸಿದ ಅಲಹಾಬಾದ್ ಹೈಕೋರ್ಟ್ ತೀರ್ಪಿಗೆ ಸುಪ್ರೀಂಕೋರ್ಟ್ ಸೋಮವಾರ ತಡೆಯಾಜ್ಞೆ ನೀಡಿದೆ.

ಅನ್ಸಾರಿ 2003ರಲ್ಲಿ ಜೈಲು ಅಧಿಕಾರಿಯತ್ತ ಬಂದೂಕು ಗುರಿ ಮಾಡಿ ಬೆದರಿಸಿದ್ದರು ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್, ಅನ್ಸಾರಿಗೆ ಏಳು ವರ್ಷಗಳ ಜೈಲುಶಿಕ್ಷೆ ವಿಧಿಸಿತ್ತು.

ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ವಿಕ್ರಮ್‌ನಾಥ್ ಅವರನ್ನು ಒಳಗೊಂಡ ಪೀಠ, ಈ ಸಂಬಂಧ ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿದ್ದು, ಅನ್ಸಾರಿ ಸಲ್ಲಿಸಿರವ ಮೇಲ್ಮನವಿ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಸೂಚಿಸಿದೆ. "ಇದು ಕೇವಲ ಮಧ್ಯಂತರ ತಡೆಯಾಜ್ಞೆ. ರಾಜ್ಯ ಸರ್ಕಾರದ ಅಭಿಪ್ರಾಯವನ್ನು ಪಡೆದು ಇದನ್ನು ದೃಢಪಡಿಸುವ ಬಗ್ಗೆ ನಿರ್ಧರಿಸಲಾಗುತ್ತದೆ" ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಕಳೆದ ವರ್ಷದ ಸೆಪ್ಟೆಂಬರ್ 21ರಂದು ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠ, ನಾಲ್ಕು ಬಾರಿಯ ಶಾಸಕ ಅನ್ಸಾರಿಯವರನ್ನು ತಪ್ಪಿತಸ್ಥರೆಂದು ನಿರ್ಣಯಿಸಿ, ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಇದಕ್ಕೂ ಮುನ್ನ 2020ರ ಡಿಸೆಂಬರ್‌ನಲ್ಲಿ ವಿಚಾರಣಾ ನ್ಯಾಯಾಲಯ, ಅನ್ಸಾರಿಯವರನ್ನು ದೋಷಮುಕ್ತಗೊಳಿಸಿತ್ತು.

2003ರ ಏಪ್ರಿಲ್‌ನಲ್ಲಿ ಲಕ್ನೋ ಜಿಲ್ಲಾ ಕಾರಾಗೃಹದ ಅಧಿಕಾರಿ ಎಸ್.ಕೆ.ಅವಸ್ತಿ, ಅನ್ಸಾರಿ ವಿರುದ್ಧ ದೂರು ನೀಡಿದ್ದರು. ಜೈಲಿನಲ್ಲಿ ಅನ್ಸಾರಿಯವರ ಭೇಟಿಗೆ ಬಂದಿದ್ದವರನ್ನು ಬೇಗ ವಾಪಾಸು ಕಳುಹಿಸುವಂತೆ ಅನ್ಸಾರಿ ಸಹಚರರಿಗೆ ಸೂಚಿಸಿದ್ದಕ್ಕಾಗಿ ಅನ್ಸಾರಿ ತಮಗೆ ಬೆದರಿಕೆ ಹಾಕಿದ್ದರು. ಈ ರಾಜಕಾರಣಿ ರಿವಾಲ್ವರ್ ಅನ್ನು ತಮ್ಮತ್ತ ಗುರಿ ಮಾಡಿದ್ದಲ್ಲದೇ ನಿಂದಿಸಿದ್ದರು ಎಂದು ಆಪಾದಿಸಲಾಗಿತ್ತು.

ಅನ್ಸಾರಿ ಪರ ಹಿರಿಯ ವಕಿಲ ಕಪಿಲ್ ಸಿಬಲ್ ಹಾಗೂ ನಿಝಾಮ್ ಪಾಷಾ ವಾದ ಮಂಡಿಸಿದ್ದರು. ಇದು ದೋಷಮುಕ್ತಗೊಳಿಸಲು ಅರ್ಹತೆ ಇರುವ ಪ್ರಕರಣವಾಗಿದ್ದು, ಯಾವ ಸಾಕ್ಷಿಯೂ ಅಭಿಯೋಜಕರ ವಾದವನ್ನು ಬೆಂಬಲಿಸಿಲ್ಲ ಎಂದು ಅನ್ಸಾರಿ ಪರ ವಕೀಲರು ವಾದ ಮಂಡಿಸಿದ್ದರು.

Similar News