3000 ಕಿ.ಮೀ. ಕ್ರಮಿಸಿದ 'ಭಾರತ್ ಜೋಡೋ ಯಾತ್ರೆ'

Update: 2023-01-03 05:49 GMT

ಹೊಸದಿಲ್ಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ 'ಭಾರತ್ ಜೋಡೋ ಯಾತ್ರೆ' ಇಂದಿಗೆ 110 ದಿನಗಳನ್ನು ಪೂರೈಸಿ, 3000 ಕಿಮೀಗೂ ಹೆಚ್ಚು ದೂರ ಕ್ರಮಿಸಿದ್ದು, ಒಂಬತ್ತು ದಿನಗಳ ವಿರಾಮದ ನಂತರ ಉತ್ತರ ಪ್ರದೇಶದಿಂದ ತನ್ನ ಯಾತ್ರೆಯನ್ನು ಮತ್ತೆ ಶುರು ಮಾಡಿದೆ.

ಸೆಪ್ಟೆಂಬರ್ 7ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಪ್ರಾರಂಭಗೊಂಡ ಭಾರತ್ ಜೋಡೋ ಯಾತ್ರೆಯು ಈವರೆಗೆ ತಮಿಳುನಾಡು, ಕೇರಳ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಧ್ಯಪ್ರದೇಶ, ರಾಜಸ್ತಾನ, ಮಹಾರಾಷ್ಟ್ರ ಮತ್ತು ಹರ್ಯಾಣ ರಾಜ್ಯಗಳಲ್ಲಿ ತನ್ನ ಯಾತ್ರೆಯನ್ನು ಪೂರೈಸಿದ್ದು, ಜಮ್ಮು ಮತ್ತು ಕಾಶ್ಮೀರದಲ್ಲಿ ಸಮಾರೋಪಗೊಳ್ಳಲಿದೆ.

ಭಾರತೀಯ ರಾಜಕಾರಣಿಗಳು ಈವರೆಗೆ ನಡೆಸಿರುವ ಪಾದಯಾತ್ರೆಗಳ ಪೈಕಿ ಈ ಯಾತ್ರೆಯು ಅತ್ಯಂತ ದೂರದ ಯಾತ್ರೆಯಾಗಿದೆ ಎಂದು ಕಾಂಗ್ರೆಸ್ ಪಕ್ಷ ಪ್ರತಿಪಾದಿಸಿದೆ.

ಜನವರಿ 26ರಂದು ಶ್ರೀನಗರದಲ್ಲಿ ಈ ಯಾತ್ರೆಯು ಸಮಾರೋಪಗೊಳ್ಳಿದ್ದು, ಇದರ ನಂತರ ಯಾತ್ರೆಯ ಸಂದೇಶವನ್ನು ಜನರ ನಡುವೆ ಹರಡಲು 'ಕೈ ಜೊತೆ ಕೈ ಜೋಡಿಸಿ' ಅಭಿಯಾನವನ್ನು ಕಾಂಗ್ರೆಸ್ ಪಕ್ಷ ನಡೆಸಲಿದೆ.

ಮೂಲಗಳ ಪ್ರಕಾರ, ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಮಹಿಳೆಯರನ್ನು ವಿಶೇಷ ಆದ್ಯತೆಯಾಗಿಸಿಕೊಂಡು ದೇಶಾದ್ಯಂತ ಹಮ್ಮಿಕೊಳ್ಳಲಾಗುವ 'ಕೈ ಜೊತೆ ಕೈ ಜೋಡಿಸಿ' ಅಭಿಯಾನದ ನೇತೃತ್ವವನ್ನು ತಮ್ಮ ಸಹೋದರಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ವಹಿಸಿದ್ದಾರೆ ಎಂದು ಹೇಳಿವೆ ಎಂದು ndtv.com ವರದಿ ಮಾಡಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, "ಭಾರತ್ ಜೋಡೋ ಯಾತ್ರೆಯ ನಂತರ ಕಾಂಗ್ರೆಸ್ ಪಕ್ಷದ ವತಿಯಿಂದ 'ಕೈ ಜೊತೆ ಕೈ ಜೋಡಿಸಿ' ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಈ ಅಭಿಯಾನದ ಭಾಗವಾಗಿ ಎಲ್ಲ ರಾಜ್ಯದ ರಾಜಧಾನಿಗಳಲ್ಲಿ 'ಭಾರತ್ ಜೋಡೋ ಯಾತ್ರೆ'ಯ ಸಂದೇಶ ಹರಡಲು ಮಹಿಳಾ ಸದಸ್ಯರೊಂದಿಗೆ ಪ್ರಿಯಾಂಕಾ ಗಾಂಧಿ ವಾದ್ರಾ ನೇತೃತ್ವದಲ್ಲಿ ಪಾದಯಾತ್ರೆ ಮತ್ತು ಸಮಾವೇಶಗಳು ನಡೆಯಲಿವೆ" ಎಂದು ತಿಳಿಸಿದ್ದಾರೆ.

ಮಾರ್ಚ್ ತಿಂಗಳಲ್ಲಿ ಪಕ್ಷದ ಮಹಿಳಾ ಸದಸ್ಯರೊಂದಿಗೆ ಪ್ರಿಯಾಂಕಾ ಗಾಂಧಿ ವಾದ್ರಾ ನೇತೃತ್ವದಲ್ಲಿ ಕೃತಜ್ಞತಾ ಯಾತ್ರೆಗಳು ನಡೆಯಲಿದ್ದು, ಈ ಸಂದರ್ಭದಲ್ಲಿ ವಿಶೇಷವಾಗಿ ಮಧ್ಯಮ ವರ್ಗ ಅನುಭವಿಸುತ್ತಿರುವ ಬೆಲೆಯೇರಿಕೆ ಹಾಗೂ ಅದರಿಂದ ಸಾರ್ವಜನಿಕ ಜೀವನದ ಮೇಲೆ ಆಗಿರುವ ದುಷ್ಪರಿಣಾಮಗಳ ಕುರಿತು ಗಮನ ಸೆಳೆಯಲಿವೆ. ಇದರೊಂದಿಗೆ ಮಹಿಳೆಯರಿಗೆ ಸಂಬಂಧಿಸಿದ ಸಮಸ್ಯೆಗಳೂ ಪ್ರಮುಖ ಸಂಗತಿಗಳಾಗಲಿವೆ ಎಂದೂ ಮೂಲಗಳು ತಿಳಿಸಿವೆ ಎಂದು ndtv.com ವರದಿ ಮಾಡಿದೆ.

Similar News