ಪಂತ್ ಕಾರು ಅಪಘಾತಕ್ಕೆ ರಸ್ತೆ ಹೊಂಡ ಕಾರಣವಲ್ಲ: ಉತ್ತರಾಖಂಡ ಸಿಎಂಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಿರುಗೇಟು
ಹರಿದ್ವಾರ: ಕ್ರಿಕೆಟಿಗ ರಿಷಬ್ ಪಂತ್ ಅವರ ಕಾರು ಅಪಘಾತಕ್ಕೀಡಾದ ರಸ್ತೆಯಲ್ಲಿ ಯಾವುದೇ ಹೊಂಡ-ಗುಂಡಿಗಳಿರಲಿಲ್ಲ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.
ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ರವಿವಾರ ಡೆಹ್ರಾಡೂನ್‌ನ ಆಸ್ಪತ್ರೆಯಲ್ಲಿ ಕ್ರಿಕೆಟಿಗನನ್ನು ಭೇಟಿಯಾದ ನಂತರ, ಹೆದ್ದಾರಿಯಲ್ಲಿನ ಗುಂಡಿಯನ್ನು ತಪ್ಪಿಸಲು ಪ್ರಯತ್ನಿಸುತ್ತಿದ್ದಾಗ ಪಂತ್ ಕಾರು ಅಪಘಾತಕ್ಕೀಡಾಯಿತು ಎಂದು ಹೇಳಿದ್ದರು.
ಆದರೆ, ಎನ್‌ಎಚ್‌ಎಐ ರೂರ್ಕಿ ವಿಭಾಗದ ಯೋಜನಾ ನಿರ್ದೇಶಕ ಪ್ರದೀಪ್ ಸಿಂಗ್ ಗುಸೇನ್ ಪಿಟಿಐ ಜೊತೆ ಮಾತನಾಡುತ್ತಾ, “ಅಪಘಾತ ಸಂಭವಿಸಿದ ರಸ್ತೆಯಲ್ಲಿ ಯಾವುದೇ ಹೊಂಡಗಳಿಲ್ಲ, ಕಾರು ಅಪಘಾತಕ್ಕೀಡಾದ ರಸ್ತೆ ಹೆದ್ದಾರಿಯ ಪಕ್ಕದಲ್ಲಿರುವ ಕಾಲುವೆ (ರಾಜ್‌ವಾಹಾ) ಯಿಂದಾಗಿ ಸ್ವಲ್ಪ ಕಿರಿದಾಗಿದೆ. ನೀರಾವರಿಗಾಗಿ ಕಾಲುವೆ ಬಳಸಲಾಗುತ್ತದೆ’’ ಎಂಧರು.
ಅಪಘಾತದ ಸ್ಥಳವನ್ನು ಎನ್‌ಎಚ್‌ಎಐ ದುರಸ್ತಿ ಮಾಡಿದೆ ಹಾಗೂ "ಗುಂಡಿಗಳನ್ನು" ಸರಿಪಡಿಸಲಾಗಿದೆ ಎಂಬ ವರದಿಯನ್ನು ಗುಸೇನ್ ನಿರಾಕರಿಸಿದರು.