ಲೈಂಗಿಕ ಕಿರುಕುಳ ಆರೋಪವಿದೆ, ಇನ್ನೂ ತಪ್ಪಿತಸ್ಥರಲ್ಲ: ಸಚಿವನ ಬಗ್ಗೆ ಹರ್ಯಾಣ ಸಿಎಂ ಹೇಳಿಕೆ

Update: 2023-01-03 12:37 GMT

ಹೊಸದಿಲ್ಲಿ: ಜೂನಿಯರ್‌ ಮಹಿಳಾ ಕೋಚ್‌ ಒಬ್ಬರು ಹೊರಿಸಿದ ಲೈಂಗಿಕ ಕಿರುಕುಳ ಆರೋಪದ ಹಿನ್ನೆಲೆಯಲ್ಲಿ ರವಿವಾರ ತಮ್ಮ ಕ್ರೀಡಾ ಸಚಿವ ಹುದ್ದೆಯ ಜವಾಬ್ದಾರಿಯನ್ನು ಮುಖ್ಯಮಂತ್ರಿ ಮನೋಹರ್‌ ಲಾಲ್‌ ಖಟ್ಟರ್‌ ಅವರಿಗೆ ವಹಿಸಿದ ಸಚಿವ  ಸಂದೀಪ್‌ ಸಿಂಗ್‌ ಅವರ ರಾಜೀನಾಮೆಗಾಗಿ ಆಗ್ರಹಗಳು ಹೆಚ್ಚುತ್ತಿವೆ. ಈ ಆರೋಪ ತಮ್ಮ ಹೆಸರು ಹಾಳುಗೆಡಹುವ ಯತ್ನ ಎಂದು ಸಿಂಗ್‌ ಈಗಾಗಲೇ ಹೇಳಿಕೊಂಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಖಟ್ಟರ್‌, ತನಿಖೆ ಮುಗಿಯುವ ತನಕ ಕಾಯುತ್ತೇವೆ ಎಂದಿದ್ದಾರೆ. "ಮಹಿಳಾ ಆಟಗಾರ್ತಿಯೊಬ್ಬರು ಆರೋಪ ಹೊರಿಸಿದ್ದಾರೆ ಆದರೆ ಅವರು ಇನ್ನೂ ತಪ್ಪಿತಸ್ಥರಲ್ಲ, ಅವರನ್ನು ಹುದ್ದೆಯಿಂದ ತೆಗೆದುಹಾಕಿದ್ದೇವೆ, ಇದರಿಂದ ತನಿಖೆ ಸುಗಮವಾಗಲಿದೆ. ತನಿಖೆ ಪೂರ್ಣಗೊಳ್ಳುವವರೆಗೆ ಕಾಯುತ್ತೇವೆ," ಎಂದು ಖಟ್ಟರ್‌ ಹೇಳಿದ್ದಾರೆ.

ಈಗಾಗಲೇ ಹರ್ಯಾಣಾದ ರೈತ ಯೂನಿಯನ್‌ಗಳು ಹಾಗೂ ಎರಡು ಖಾಪ್‌ಗಳು ಸಿಂಗ್‌ ರಾಜೀನಾಮೆಗೆ ಆಗ್ರಹಿಸಿವೆ ಹಾಗೂ ಬೇಡಿಕೆ ಈಡೇರದೇ ಇದ್ದರೆ ಪ್ರತಿಭಟನೆಯ ಹಾದಿ ಹಿಡಿಯುವ ಎಚ್ಚರಿಕೆ ನೀಡಿವೆ.

ಭಾರತದ ಮಾಜಿ ಹಾಕಿ ಕಪ್ತಾನ ಆಗಿರುವ ಸಂದೀಪ್‌ ಸಿಂಗ್‌ ಮೊದಲ ಬಾರಿ ಬಿಜೆಪಿ ಶಾಸಕರಾಗಿರುವವರು.  ಮಹಿಳಾ ಕೋಚ್‌ ಮೇಲೆ ಅತ್ಯಾಚಾರವೆಸಗಿದ ಆರೋಪ ಅವರ ಮೇಲಿದೆ.

Similar News