ಒಂದೇ ದಿನ ಯೆರವಡಾ ಜೈಲಿನ ಮೂವರು ಕೈದಿಗಳ ಸಾವು, ಕುಟುಂಬಗಳಿಂದ ಪ್ರತಿಭಟನೆ
ಪುಣೆ,ಜ.3: ಇಲ್ಲಿಯ ಯೆರವಡಾ ಸೆಂಟ್ರಲ್ ಜೈಲಿನಲ್ಲಿಯ ಮೂವರು ವಿಚಾರಣಾಧೀನ ಕೈದಿಗಳು ಡಿ.31ರಂದು ಸ್ಥಳೀಯ ಸಸೂನ್ ಸರಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು,ಅವರ ಕುಟುಂಬ ಸದಸ್ಯರು ಪ್ರತಿಭಟನೆಯಲ್ಲಿ ತೊಡಗಿದ್ದಾರೆ.
ಮೂವರು ಕೈದಿಗಳು ಪ್ರತ್ಯೇಕ ಕಾಯಿಲೆಗಳಿಂದಾಗಿ ಸಸೂನ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಈ ಪೈಕಿ ಓರ್ವ ಎಚ್ಐವಿ ಪಾಸಿಟಿವ್ ಆಗಿದ್ದರೆ ಇನ್ನೋರ್ವ ಯಕೃತ್ತು ರೋಗದಿಂದ ಬಳಲುತ್ತಿದ್ದ. ಮೂರನೇ ಕೈದಿಗೆ ಹೃದಯ ಸಂಬಂಧಿತ ಸಮಸ್ಯೆಯಿತ್ತು ಎಂದು ತಿಳಿಸಿದ ಪೊಲೀಸ್ ಅಧಿಕಾರಿ ಅಶೋಕ ಕಾಟೆ,ಈ ಬಗ್ಗೆ ಆಕಸ್ಮಿಕ ಸಾವು ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದರು.
ಆದರೆ ಈ ಹೇಳಿಕೆಯನ್ನು ತಿರಸ್ಕರಿಸಿರುವ ಮೃತರ ಕುಟುಂಬಗಳು, ಅವರ ಸಾವುಗಳಿಗೆ ಕಾರಣಗಳ ಕುರಿತು ವಿವರವಾದ ವಿಚಾರಣೆಗೆ ಆಗ್ರಹಿಸಿದ್ದಾರೆ.
ಸೋಮವಾರ ಮೃತ ಮೂವರು ವಿಚಾರಣಾಧೀನ ಕೈದಿಗಳ ಕುಟುಂಬ ಸದಸ್ಯರು ಜೈಲು ಆವರಣದ ಹೊರಗೆ ಪ್ರತಿಭಟನೆ ನಡೆಸಿದ್ದರು. ಜೈಲಿನಲ್ಲಿಯ ತಮ್ಮವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಿದ್ದ ಬಗ್ಗೆ ತಮಗೆ ಮಾಹಿತಿಯನ್ನು ನೀಡಿರಲಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಕೈದಿಗಳ ಪೈಕಿ ರಂಗನಾಥ ದಾತಾಲ್ ಎಂಬಾತನನ್ನು ಡಿ.28ರಂದು ಹಾಗೂ ಸಂದೇಶ ಗೊಂದೇಕರ್ ಮತ್ತು ಶಾರುಖ್ ಶೇಖ್ ಅವರನ್ನು ಡಿ.31ರಂದು ಸಸೂನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು ಮತ್ತು ಎಲ್ಲ ಮೂವರೂ ಅದೇ ದಿನ ಮೃತಪಟ್ಟಿದ್ದರು.ಯೆರವಡಾ ಜಗತ್ತಿನ ಬೃಹತ್ ಜೈಲುಗಳಲ್ಲೊಂದಾಗಿದ್ದು ಎಲ್ಗಾರ್ ಪರಿಷದ್ ಪ್ರಕರಣದ ಹಲವು ವಿಚಾರಣಾಧೀನ ಕೈದಿಗಳನ್ನೂ ಇಲ್ಲಿರಿಸಲಾಗಿದೆ.